ಎಚ್.ಕೆ. ನರಸಿಂಹಮೂರ್ತಿ (೦೪.೦೫.೧೯೪೬): ದೇಶದ ಅತ್ಯುತ್ತಮ ಪಿಟೀಲು ವಾದಕರೆನಿಸಿರುವ ನರಸಿಂಹ ಮೂರ್ತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ತಂದೆ ಎಚ್.ಎಸ್. ಕೃಷ್ಣಮೂರ್ತಿ, ಸ್ವಾತಂತ್ರ‍್ಯ ಹೋರಾಟಗಾರರು. ತಾಯಿ ಜಯಲಕ್ಷ್ಮಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ. ಸಂಗೀತದಲ್ಲಿ ಬೆಳೆದ ಒಲವು. ಕೇಶವಯ್ಯನವರಿಂದ ಕಲಿತ ಗಾಯನ ಮತ್ತು ಎಚ್.ಟಿ. ಪುಟ್ಟಸ್ವಾಮಯ್ಯ, ಎಚ್.ವಿ. ಕೃಷ್ಣನ್, ಎಂ.ಸಿ. ಪುಟ್ಟಸ್ವಾಮಯ್ಯ, ಟಿ.ಪುಟ್ಟಸ್ವಾಮಯ್ಯ, ಎ.ಕೆ.ಮುತ್ತಣ್ಣ ಇವರ ಬಳಿ ಕಲಿತದ್ದು ಗಾಯನ ಹಾಗೂ ಪಿಟೀಲು ವಾದನ.
ಕರ್ನಾಟಕ ಸರಕಾರದ ಟೆಕ್ನಿಕಲ್ ಬೋರ್ಡ್‌ನಿಂದ ಸೀನಿಯರ್ ಮ್ಯೂಸಿಕ್, ಮದರಾಸಿನ ಸೆಂಟ್ರಲ್ ಕಾಲೇಜ್ ಆಫ್ ಮ್ಯೂಸಿಕ್ ನಿಂದ ಪ್ರಥಮ ದರ್ಜೆಯಲ್ಲಿ ಸಂಗೀತ ವಿದ್ವಾನ್ ಪದವಿ. ಎಂ.ಎಸ್. ಅನಂತರಾಮನ್, ಎಂ.ಎಸ್.ಗೋಪಾಲಕೃಷ್ಣನ್ ರವರ ಬಳಿ ಪ್ರೌಢ ಶಿಕ್ಷಣ. ಕೇಂದ್ರ ಸರಕಾರದ ವಿದ್ಯಾರ್ಥಿ ವೇತನ ಪಡೆದು ಕರೂರ್ ಸುಂದರಂ ಅಯ್ಯರ್ ರವರಲ್ಲಿ ಪಡೆದ ಉನ್ನತ ಶಿಕ್ಷಣ.
[sociallocker]೧೯೬೯ ರಿಂದ ನಿಲಯದ ಕಲಾವಿದರಾಗಿ ಮೈಸೂರು ಆಕಾಶವಾಣಿಯಲ್ಲಿ ಸಲ್ಲಿಸಿದ ಸೇವೆ. ಆಕಾಶವಾಣಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಾಂಬೆ ಸಹೋದರಿಯರು, ರುದ್ರಪಟ್ಣಂ ಸಹೋದರರು, ಸುಕನ್ಯಾ ಪ್ರಭಾಕರ್ ಮುಂತಾದವರಿಗೆ ನೀಡಿದ ಸಾಥ್. ಏಕವ್ಯಕ್ತಿಯಾಗಿಯೂ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು.ಮಹಾರಾಜಪುರಂ ವಿಶ್ವನಾಥ್ ಅಯ್ಯರ್, ಚೆಂಬೈ ವೈದ್ಯನಾಥ ಭಾಗವತರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆಲತ್ತೂರು ಶ್ರೀನಿವಾಸ ಅಯ್ಯರ್, ಬಿ. ರಾಜಮ್ ಅಯ್ಯಂಗಾರ್, ಡಾ. ಎಸ್. ರಾಮನಾಥನ್, ಶ್ರೀಮತಿ ಡಿ.ಕೆ. ಪಟ್ಟಮ್ಮಾಳ್, ಕದ್ರಿಗೋಪಾಲನಾಥ್, ಬಿ.ದೇವೇಂದ್ರಪ್ಪ ಮುಂತಾದವರುಗಳ ಸಂಗೀತಕ್ಕೆ ನೀಡಿದ ಪಿಟೀಲು ವಾದನ ಸಹಕಾರ, ದೇಶಾದ್ಯಂತ ಕಾರ್ಯಕ್ರಮಗಳು.
ಹಲವಾರು ಸಂಗೀತ ಸ್ಪರ್ಧೆಗಳಲ್ಲಿ, ವಾರ್ಷಿಕ ಸ್ಪರ್ಧೆಗಳಲ್ಲಿ ಗಳಿಸಿದ ಬಹುಮಾನಗಳು. ಮದರಾಸಿನ ಮ್ಯೂಸಿಕ್ ಅಕಾಡಮಿಯಿಂದ ಬೆಸ್ಟ್ ಜ್ಯೂನಿಯರ್ ವಯಲನಿಸ್ಟ್ ಪ್ರಶಸ್ತಿ, ಧನುರ್ವೀಣಾ ರತ್ನ, ಗಾನಕಲಾಭಾಸ್ಕರ, ಶ್ರೇಷ್ಠಾಚಾರ್ಯ, ಆಸ್ಥಾನ ವಿದ್ವಾನ್, ಸಂಗೀತ ಕಲಾತಪಸ್ವಿ, ಸಂಗೀತ ಕಲಾಭೂಷಣ, ಪ್ರಣವ ಶ್ರೀ ಪ್ರಶಸ್ತಿ, ಅನನ್ಯ ಪುರಸ್ಕಾರ, ಆಚಾರ್ಯರತ್ನ ಮುಂತಾದ ಬಿರುದುಗಳು. ಯು.ಎಸ್.ಎ. ಕೆನಡಾ, ದುಬೈ, ಅಬುದಾಬಿ, ಮಸ್ಕಟ್, ಬೆಹ್ರೆನ್ ಮುಂತಾದೆಡೆ ತರಗತಿ, ಸಂಗೀತ ಕಾರ್ಯಕ್ರಮಗಳು. ಇದೀಗ ವಾಷಿಂಗ್‌ಟನ್ ಬಳಿ ಮೆರಿಲ್ಯಾಂಡ್‌ನಲ್ಲಿ ಸಂಗೀತ ಉಪಾಧ್ಯಾಯರಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪಿಟೀಲು ಶಿಕ್ಷಣ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.