H L N Simha

ಎಚ್. ಎಲ್. ಎನ್. ಸಿಂಹ

ಎಚ್ ಎಲ್ ಎನ್ ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಕನ್ನಡದ ವರನಟ ರಾಜ್ ಕುಮಾರ್ ಅವರನ್ನೊಳಗೊಂಡಂತೆ ಕನ್ನಡಕ್ಕೆ ಅವರು ನೀಡಿದ ಅಸಾಮಾನ್ಯ ಕೊಡುಗೆಗಳು ಅವಿಸ್ಮರಣೀಯ. ಐದು ದಶಕಗಳಿಗೂ ಹೆಚ್ಚು ಕಾಲ ಅವರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.

ಜೀವನ: ಎಚ್ ಎಲ್ ಎನ್ ಸಿಂಹ ಅವರು ಜನಿಸಿದ್ದು ಜುಲೈ ೨೫, ೧೯೦೬ರ ವರ್ಷದಲ್ಲಿ. ಊರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮ. ತಂದೆ ನರಸಿಂಹಯ್ಯನವರು ಮತ್ತು ತಾಯಿ ಲಕ್ಷ್ಮಮ್ಮನವರು.

ರಂಗಭೂಮಿಯಲ್ಲಿ: ಸಿಂಹರು ಶಾಲೆಯಲ್ಲಿ ಓದಿದ್ದಕ್ಕಿಂತ ರಂಗದಲ್ಲಿ ಕಲಿತದ್ದೇ ಹೆಚ್ಚು. ನಾಟಕ ಶೀರೋಮಣಿ ವರದಾಚಾರ್ಯರ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಅಭಿನಯಿಸತೊಡಗಿದ ಅವರು ಭಕ್ತ ಮಾರ್ಕಂಡೇಯ ನಾಟಕದಲ್ಲಿ ಮಾರ್ಕಂಡೇಯನಾಗಿ ಅದ್ಭುತ ನಟನಾಕೌಶಲ ಪ್ರದರ್ಶಿಸಿದ್ದರು.

ಯುವಕರಾಗಿದ್ದ ಸಿಂಹ ಅವರು ತಾವೇ ಹಲವಾರು ನಾಟಕಗಳನ್ನು ಬರೆದು ಪ್ರಸಿದ್ಧ ರಂಗಭೂಮಿ ಕಲಾವಿದರಾದ ಮಹಮ್ಮದ್ ಪೀರ್ ಅವರೊಂದಿಗೆ ರಂಗಪ್ರದರ್ಶನಗಳಿಗೆ ಅಳವಡಿಸಿದರು. ಮುಂದೆ ಟೈಗರ್ ವರದಾಚಾರ್ಯರ ಕಂಪೆನಿಯನ್ನು ಸೇರಿದ ಸಿಂಹರು ಹಲವಾರು ಸಣ್ಣ ಸಣ್ಣ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಈ ಈರ್ವರು ಸೇರಿ ಸ್ಥಾಪಿಸಿದ ಸಂಸ್ಥೆ ‘ಚಂದ್ರಕಲಾ ನಾಟಕ ಮಂಡಳಿ’. ನಂತರದಲ್ಲಿ ಸಿ.ಬಿ. ಮಲ್ಲಪ್ಪ, ಗುರುಕರ್, ಗುಬ್ಬಿ, ಪೀರ್ ಮುಂತಾದ ನಾಟಕ ಕಂಪೆನಿಗಳಲ್ಲಿ ಸೇರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಸಿಂಹರು ಪ್ರತಿಷ್ಟಿತ ನಟರಾಗಿ ಜನಪ್ರಿಯರಾದರು.

ಸಿಂಹರ ಪ್ರತಿಭೆಯನ್ನು ಮೆಚ್ಚಿಕೊಂಡ ಗುಬ್ಬಿ ವೀರಣ್ಣನವರು ಅವರನ್ನು ನಿರ್ದೇಶನ ಕಲಿಯಲಿಕ್ಕಾಗಿ ಮುಂಬೈಗೆ ಕಳುಹಿಸಿಕೊಟ್ಟರು. ತರಬೇತಿ ಮುಗಿಸಿಕೊಂಡು ಬಂದ ಸಿಂಹರು ಗುಬ್ಬಿವೀರಣ್ಣನವರೊಂದಿಗೆ ಸಹನಿರ್ದೇಶಕರಾಗಿ “ಅವನ ಪ್ರೇಮ ಕಥೆ” ಎಂಬ ಮೂಖಿ ಚಿತ್ರವನ್ನು ನಿರ್ಮಿಸಿದರು. ಎಚ್ ಎಲ್ ಎನ್ ಸಿಂಹರನ್ನು ರಂಗಭೂಮಿಯ ನಿರ್ಮಾಪಕ ನಿರ್ದೇಶಕರಾಗಿ ಉತ್ತುಂಗಕ್ಕೇರಿಸಿದ್ದು ‘ಸಂಸಾರ ನೌಕ’ ನಾಟಕ. ೧೯೩೩ರಲ್ಲಿ ಮೊದಲಬಾರಿಗೆ ಪ್ರದರ್ಶನ ಕಂಡ ‘ಸಂಸಾರ ನೌಕ’ ನಾಟಕ ಹಿಂದಿನ ಪೌರಾಣಿಕ ಮತ್ತು ಚಾರಿತ್ರಿಕ ಹಾದಿಗಳನ್ನು ಬಿಟ್ಟು ಹೊಸದಾದ ಮಾರ್ಗವನ್ನು ರಂಗಭೂಮಿಗೆ ತಂದಿತು. ವರದಕ್ಷಿಣೆ, ನಿರುದ್ಯೋಗ, ಬಾಲ್ಯವಿವಾಹ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಭಿಸಿದ ‘ಸಂಸಾರ ನೌಖ’ ಕರ್ನಾಟಕವಲ್ಲದೆ ತಮಿಳುನಾಡಿನಲ್ಲೂ ಅತ್ಯಂತ ಜನಪ್ರಿಯ ಪ್ರದರ್ಶನಗಳನ್ನು ಕಂಡಿತು.

‘ಶಹಜಹಾನ್’ ನಾಟಕದಲ್ಲಿ ಷಹಜಹಾನನ ಪಾತ್ರ, ‘ಗೌತಮ ಬುದ್ಧ’ದಲ್ಲಿ ಚೆನ್ನನ ಪಾತ್ರಗಳು ಸಿಂಹರಿಗೆ ಮಹತ್ವದ ಗೌರವಗಳನ್ನು ತಂದಿತ್ತವು. ನಾಡಿನಾದ್ಯಂತ ಕಲಾರಸಿಕರಷ್ಟೇ ಅಲ್ಲದೆ ಟಿ. ಪಿ. ಕೈಲಾಸಂ, ಪಂಡಿತ ತಾರಾನಾಥ್, ತಿರುಮಲೆ ತಾತಾ ಶರ್ಮ ಅವರಂತಹ ಮೆಧಾವಿಗಳಿಂದ ಕೂಡಾ ಎಚ್ ಎಲ್ ಎನ್ ಸಿಂಹರ ನಟನೆ ಮತ್ತು ನಿರ್ದೇಶನ ಸಾಮರ್ಥ್ಯಗಳು ಪ್ರಶಂಸೆ ಗಳಿಸಿದವು.

‘ಸಿಂಹ ಸೆಲೆಕ್ಟ್ ಆರ್ಟಿಸ್ಟ್’ ಎಂಬ ತಮ್ಮದೇ ಆದ ನಾಟಕ ಸಂಸ್ಥೆ ಸ್ಥಾಪಿಸಿದ ಸಿಂಹರು ‘ಅಬ್ಬಾ ಆ ಹುಡುಗಿ’, ‘ಬಂಗಾರದ ಬರ’, ‘ಮಧಕರಿ ನಾಯಕ’ ಮುಂತಾದ ನಾಟಕಗಳನ್ನು ಪ್ರದರ್ಶಿಸಿದರು. ಅವರ ನಾಟಕ ಸಂಸ್ಥೆಯಿಂದ ಹೊರಬಂದ ಪ್ರಮುಖ ಕಲಾವಿದರೆಂದರೆ ಹಾಸ್ಯನಟ ರತ್ನಾಕರ್, ಎಂ.ವಿ.ನಾರಾಯಣ ರಾವ್, ಚಿತ್ರ ಸಾಹಿತಿ ಸೋರಟ್ ಅಶ್ವಥ್ ಮತ್ತು ಪ್ರಖ್ಯಾತ ಅಭಿನೇತ್ರಿ ಎಂ. ವಿ.ರಾಜಮ್ಮ.

ಚಿತ್ರರಂಗದಲ್ಲಿ: ಮುಂದೆ ಎಚ್ ಎಲ್ ಎನ್ ಸಿಂಹರು ಚಿತ್ರರಂಗಕ್ಕೆ ಬಂದರು. ಮದ್ರಾಸಿನ ಪ್ರಖ್ಯಾತ ಚಿತ್ರ ನಿರ್ಮಾಪಕರಾದ ಕೆ. ರಾಜಗೋಪಾಲ ಚೆಟ್ಟಿಯಾರ್ ಅವರು ‘ಸಂಸಾರ ನೌಕೆ’ಯನ್ನು ಚಲನಚಿತ್ರವಾಗಿಸಲು ಆಹ್ವಾನ ನೀಡಿದರು. ಹೀಗಾಗಿ ‘ಸಂಸಾರ ನೌಕೆ’ ಕನ್ನಡದ ಮೊದಲ ಸಾಮಾಜಿಕ ಚಿತ್ರವಾಗಿ ಹೊರಬಂದಿತು. ಈ ಚಿತ್ರದಿಂದ ಎಚ್ ಎಲ್ ಎನ್ ಸಿಂಹರು ಬಿ.ಆರ್ ಪಂತುಲು, ಎಂ.ವಿ. ರಾಜಮ್ಮ, ಡಿಕ್ಕಿ ಮಾಧವ ರಾವ್, ತಮಾಷಾ ಮಾಧವರಾವ್, ಹುಣಸೂರು ಕೃಷ್ಣಮೂರ್ತಿ, ಮತ್ತು ಹನುಮಂತರಾವ್ ಅಂತಹ ಶ್ರೇಷ್ಠ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

ಎಚ್. ಎಲ್. ಎನ್ ಸಿಂಹರು ‘ಬೇಡರ ಕಣ್ಣಪ್ಪ’ ಪಾತ್ರಕ್ಕೆ ಸೂಕ್ತ ವ್ಯಕ್ತಿಯ ತಲಾಷೆಯಲ್ಲಿದ್ದಾಗ ನಂಜನಗೂಡಿನ ಬಳಿ ಮುತ್ತುರಾಜ್ ಎಂಬ ಯುವಕನನ್ನು ಕಂಡರು. ಈ ಯುವಕನಿಗೆ ರಾಜ್ ಕುಮಾರ್ ಎಂದು ಹೆಸರಿಟ್ಟು ಪರಿಚಯಿಸಿದ ಸಿಂಹರು ಕನ್ನಡ ಚಿತ್ರರಂಗದ ಅನರ್ಘ್ಯ ರತ್ನವಾದ ದಾದಾ ಸಾಹೇಬ್ ಫಾಲ್ಕೆ ಗೌರವಿತ ಡಾ. ರಾಜ್ ಕುಮಾರ್ ಅವರನ್ನು ಕೊಡುಗೆ ಇತ್ತರು. ಡಾ. ರಾಜ್ ಕುಮಾರ್ ಅಲ್ಲದೆ ಡಾ. ಜಿ.ವಿ.ಅಯ್ಯರ್, ನರಸಿಂಹ ರಾಜು, ರಾಜಾ ಸುಲೋಚನ, ಡಾ. ಹೊನ್ನಪ್ಪ ಭಾಗವತರ್, ರಾಜಾ ಶಂಕರ್, ಬಿ, ಹನುಮಂತಾಚಾರ್ ಇಂತಹ ಮಹಾನ್ ಪ್ರತಿಭೆಗಳ ಗಣಿಗಳನ್ನು ಸಹಾ ಸಿಂಹರು ಚಿತ್ರರಂಗಕ್ಕೆ ತಂದರು.

‘ಗುಣಸಾಗರಿ’, ‘ತೇಜಸ್ವಿನಿ’ ಎಚ್ ಎಲ್ ಎನ್ ಸಿಂಹರ ಇನ್ನಿತರ ಪ್ರಮುಖ ಚಿತ್ರಗಳಲ್ಲಿ ಸೇರಿವೆ. ಎಪ್ಪತ್ತರ ದಶಕದಲ್ಲಿ ತೆರೆಕಂಡ ‘ಅನುಗ್ರಹ’ ಎಚ್ ಎಲ್ ಎನ್ ಸಿಂಹರ ಕೊನೆಯ ಚಿತ್ರ.

ವಿದಾಯ: ಎಚ್ ಎಲ್ ಎನ್ ಸಿಂಹರು ಜುಲೈ ೩, ೧೯೭೨ರಲ್ಲಿ ಈ ಲೋಕವನ್ನಗಲಿದರು. ಅವರು ನೀಡಿದ ಅಸಾಮಾನ್ಯ ಕೊಡುಗೆಗಳಿಗಾಗಿ ಅವರೆಂದೂ ಚಿರಮಾನ್ಯರು.

wikipedia

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *