ಎಂ.ಶ್ರೀನಾಥ್ ಮರಾಠೆ (೧೯೪೪): ತಮ್ಮ ಸಿರಿಕಂಠದಿಂದ ಪ್ರಖ್ಯಾತರಾಗಿರುವ ಶ್ರೀನಾಥ ಮರಾಠೆಯವರು ಹುಟ್ಟಿದ್ದು ಕಾರ್ಕಳ ತಾಲ್ಲೂಕಿನ ಮಾಳ ಎಂಬಲ್ಲಿ. ತಂದೆ ಮಹಾದೇವ ಮರಾಠೆ, ತಾಯಿ ಅನ್ನಪೂರ್ಣ. ವಿದ್ಯಾಭ್ಯಾಸ ಹೈಸ್ಕೂಲು ವರೆಗೆ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಗಾಯನದತ್ತ ಬೆಳೆದ ಒಲವು ದೇವರ ನಾಮ ಹಾಡುಗಾರಿಕೆಯ ಹಲವಾರು ಸ್ಫರ್ಧೆಗಳಲ್ಲಿ ಬಹುಮಾನ ವಿಜೇತರು. ಇವರ ಸಂಗೀತದ ಆಸಕ್ತಿಗೆ ಪ್ರೋತ್ಸಾಹ ನೀಡಿದವರು ಎಚ್.ಗಣಪತಿಭಟ್ ಪಾಠಕ್ ಮತ್ತು ಡಿ. ವಿಶ್ವನಾಥ ಪಾಠಕ್‌ರವರು.
೧೬ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಪ್ರಾರಂಭ. ಕೆ.ವಿ. ಸುಬ್ರಹ್ಮಣ್ಯ ಅಯ್ಯರ್ ರವರಲ್ಲಿ ಗುರುಕುಲ ಪದ್ಧತಿಯಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮುಂದುವರೆದ ವಿದ್ಯಾಭ್ಯಾಸಕ್ಕಾಗಿ ಸೇರಿದ್ದು ವಾರಣಾಸಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರೀಯ ಸಂಗೀತದ ಪ್ರಾಧ್ಯಾಪಕರಾಗಿದ್ದ ಸಂಗೀತ ಸುಧಾಕರ ಶ್ರೀರಂಗಂ. ಆರ್.ಕಣ್ಣನ್ ರವರಲ್ಲಿ ಹೆಚ್ಚಿನ ವಿದ್ಯಾಭ್ಯಾಸ. ನಂತರ ಬೆಂಗಳೂರಿಗೆ ಬಂದು ನೀಡಿದ ಹಲವಾರು ಕಾರ್ಯಕ್ರಮಗಳು. ಪ್ರಸಾರಭಾರತಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಪ್ರಾರಂಭಿಸಿ ಆಕಾಶವಾಣಿ ನಿಲಯದ ಕಲಾವಿದರಾಗಿ ನೇಮಕ. ಬೆಂಗಳೂರು ಆಕಾಶವಾಣಿಯಲ್ಲಿ ಎಂಟುವರ್ಷ ಸೇವೆ. ಅರುಣೋದಯದ ’ವಂದನ’, ಅಪರಾಹ್ನದ ’ಸ್ವರಮಾಧುರ್ಯ’, ಮುಸ್ಸಂಜೆಯ ಚಿತ್ರಾಕರ್ಷಕ ’ಸಂಗೀತಪಾಠ’, ರಾತ್ರಿ ಸುಮಧುರ ಗಾಯನ ಹೀಗೆ ಚತುರ್ಕಾಲ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು.
ಒಟ್ಟು ನಾಲ್ಕು ದಶಕಗಳ ಆಕಾಶವಾಣಿ ಒಡನಾಟ, ದೇಶಾದ್ಯಂತ ನೀಡಿದ ಹಲವಾರು ಕಾರ್ಯಕ್ರಮಗಳು. ಬೆಂಗಳೂರು, ಮೈಸೂರು, ಚೆನ್ನೈ, ಕಾನ್‌ಪುರ, ಕೇರಳದ ಅನೇಕ ಕಡೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು. ದೂರದರ್ಶನದಲ್ಲೂ ಕಾರ್ಯಕ್ರಮ ಪ್ರಸಾರ.
ಕಾರ್ಕಳದ ಅಶ್ವತ್ಥಪುರದಲ್ಲಿ ನಡೆದ ಆರನೆ ಕಾರ್ಕಳ ತಾಲ್ಲೂಕು ಸಾಹಿತ್ಯ ಸಮ್ಮೇಳನ, ಚಿತ್ಪಾವನ ಬ್ರಾಹ್ಮಣ ಸಮಾಜವತಿಯಿಂದ ದರ್ಭೆತ್ರಡ್ಕ ಪರಶುರಾಮ ಕ್ಷೇತ್ರದಲ್ಲಿ ಪರಶುರಾಮ ಪ್ರಶಸ್ತಿ, ಸುರ್ವಣ ಕರ್ನಾಟಕದ ರಾಜ್ಯೋತ್ಸವ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ನವೋದಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.