MS Ananta Rao

ಎಂ.ಎಸ್. ಅನಂತರಾವ್

ಎಂ.ಎಸ್. ಅನಂತರಾವ್ (೩೧-೩-೧೯೨೫): ಮಾದಾಪುರ ಸುಬ್ಬರಾವ್ ಅನಂತರಾವ್‌ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸುಬ್ಬರಾವ್, ತಾಯಿ ಮಹಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಪಡೆದುದು ಮೈಸೂರಿನಲ್ಲಿ. ತಂದೆಗೆ ಬೆಂಗಳೂರಿಗೆ ವರ್ಗ. ಇಂಟರ್ ಮೀಡಿಯೇಟ್‌ಗೆ ಸೇರಿದ್ದು ಬೆಂಗಳೂರಿಗೆ ಸೇಂಟ್ ಜೋಸೆಫ್ ಕಾಲೇಜು. ಪದವಿ ತರಗತಿಗೆ ಸೇರಲಾಗದೆ ಓದಿಗೆ ವಿಘ್ನ.

ಉದ್ಯೋಗದ ಬೇಟೆ ಪ್ರಾರಂಭ. ಕೆಲವು ಕಡೆ ಸಣ್ಣ ಪುಟ್ಟ ಸ್ಥಳೀಯ ಕಛೇರಿಯಲ್ಲಿ ವೃತ್ತಿ. ಅಂಚೆ ಕಛೇರಿಯ ಸಂದರ್ಶನದಲ್ಲಿ ತೇರ್ಗಡೆ. ಖುಲಾಯಿಸಿದ ಅದೃಷ್ಟ. ಮದರಾಸು ಸರ್ಕಲ್ ಮೌಂಟ್ ರೋಡು ಪೋಸ್ಟಾಫೀಸಿನಲ್ಲಿ ೧೯೬೦ರಲ್ಲಿ ಉದ್ಯೋಗ ಪ್ರಾರಂಭ. ಮದರಾಸು ಅಂದು ದಕ್ಷಿಣ ಭಾರತದ ಚಿತ್ರೋದ್ಯಮದಕೇಂದ್ರ ಬಿಂದು. ಅಚಾನಕವಾಗಿ ಚಿತ್ರ ನಿರ್ದೇಶಕರೊಬ್ಬರ ಪರಿಚಯ. ಇವರ ಕೆಂಪಗಿನ ಶರೀರದ ಆಜಾನುಬಾಹು ವ್ಯಕ್ತಿತ್ವಕ್ಕೆ ಬೆರಗಾಗಿ ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ನೀಡಿದ್ದು ಸ್ಕೂಲ್ ಇನ್‌ಸ್ಪೆಕ್ಟರರ ಪಾತ್ರ. ಅಚ್ಚುಕಟ್ಟಾದ ನಿರ್ವಹಣೆ. ಖುಷಿಗಾಗಿ ಕೆಲವು ನಾಟಕಗಳಲ್ಲೂ ಅಭಿನಯ. ಜೊತೆಗೆ ಬೆಳೆದುಬಂದ ಸಾಹಿತ್ಯ ರಚನೆಯ ಹವ್ಯಾಸ.

ಮೈಸೂರಿನಲ್ಲಿದ್ದಾಗ ಪ್ರಕಾಶಕರಾದ ರಾ.ನ. ಹಬ್ಬುರವರ ಭೇಟಿ. ಇವರು ಬರೆದ ಕಾದಂಬರಿ ಓದಿ, ಮೂರು ದಿವಸದಲ್ಲೇ, ಪ್ರಕಟಿಸಬಹುದೆಂಬ ತೀರ‍್ಮಾನ ತಿಳಿಸಿದ್ದು ಮತ್ತಷ್ಟು ಸಂತಸ ತಂದ ವಿಚಾರ. ಪ್ರಕಟಣೆಗಾಗಿ ವರ್ಷಗಳೇ ಕಾಯುವ ಲೇಖಕರಿರುವಾಗ ಶೀಘ್ರದಲ್ಲಿ ಪ್ರಕಟವಾಗುತ್ತದೆಂಬ ಅದೃಷ್ಟಕ್ಕೆ ಇವರಿಗೇ ಆದ ಆಶ್ಚರ‍್ಯ. ಮೊದಲ ಕಾದಂಬರಿ ‘ಹಾಲಹಲ’ ಪ್ರಕಟಿತ. ಈ ಕಾದಂಬರಿಗೆ ೧೯೫೯ರಲ್ಲಿ ದೊರೆತ ರಾಜ್ಯ ಪ್ರಶಸ್ತಿ. ಪ್ರಶಸ್ತಿಯಿಂದ ಮತ್ತಷ್ಟು ಸಂತಸ. ೧೯೬೦ರಲ್ಲಿ ಎರಡನೆಯ ಕಾದಂಬರಿ ‘ಸಮಾಪ್ತಿ’ ಪ್ರಕಟಿತ. ನಂತರ ೧೯೬೮ರಲ್ಲಿ ‘ಪಾರ್ವತಿಯ ಭಾಗ್ಯ’, ೧೯೭೯ರಲ್ಲಿ ವಿಶ್ವರೂಪ ಮುಂತಾದ ಕಾದಂಬರಿಗಳು ಪ್ರಕಟಿತ. ಇದು ಸಿನಿಮಾ ರಂಗದ ನಂಟಿನಿಂದ ರಚಿಸಿದ ಕಾದಂಬರಿ. “ಇನ್ನಷ್ಟು ಆಕರ್ಷಕವಾಗಿ ಮೂಡಿಸಬೇಕೆಂಬ ಉದ್ದೇಶದಿಂದ ಸಿನಿಮಾ ತಂತ್ರವನ್ನು ಬಳಸಿದ್ದರೆನ್ನ ಬಹುದು. ಆಗ ಕಾದಂಬರಿ ರೂಪ ಬದಲಾದರೂ ಕೆಲವೊಮ್ಮೆ ಅತಿ ಭಾವುಕತೆಯ ಸನ್ನಿವೇಶಗಳೊಂದಿಗೆ ಕಥೆ ಅತಿ ವೇಗವಾಗಿ ಸಾಗುವುದರಿಂದ ಈ ತಂತ್ರವೂ ಆಕರ್ಷಕವಾಗಿ ತೋರುತ್ತದೆ” ಇದು ಗೀತಪ್ರಿಯರು ವಿಶ್ವರೂಪ ಕಾದಂಬರಿಗೆ ಬರೆದ ಮುನ್ನುಡಿ ವಾಕ್ಯ. ಇದಲ್ಲದೆ ಮತ್ತೊಂದು ಕಾದಂಬರಿ ‘ವಸಂತಗೀತ’. ಹಲವಾರು ಸಣ್ಣ ಕಥೆಗಳನ್ನು ಬರೆದ ಅನುಭವ. ಸಣ್ಣಕಥೆಗಳ ಸಂಕಲನ “ಜೋನಿ ಮತ್ತು ಇತರ ಕಥೆಗಳು” ಪ್ರಕಟಿತ. ೧೯೭೯ರಲ್ಲಿ ಬೆಂಗಳೂರಿನ ಮಹಾ ಅಂಚೆ ಕಚೇರಿಗೆ ವರ್ಗಾವಣೆ. ನಿವೃತ್ತರಾಗುವವರೆವಿಗೂ ಇದೇ ಕಚೇರಿಯಲ್ಲಿ ಸೇವೆ ಸಲ್ಲಿಸಿದರು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.93 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

2 ಪ್ರತಿಕ್ರಿಯೆಗಳು

  1. ಎಂ.ಎಸ್. ಅನಂತರಾವ್

  2. ಎಂ.ಎಸ್. ಅನಂತರಾವ್

Leave a Reply

Your email address will not be published. Required fields are marked *