MR Kamala

ಎಂ.ಆರ್. ಕಮಲ

ಎಂ.ಆರ್. ಕಮಲ (೨೭-೩-೧೯೫೯): ಭರತನಾಟ್ಯ ಪ್ರವೀಣೆ, ವೀಣಾವಾದಕಿ, ಕವಯಿತ್ರಿ ಶ್ರೀಮತಿ ಎಂ.ಆರ್. ಕಮಲರವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ, ಮೇಟಿ ಕುರ್ಕೆಗ್ರಾಮದಲ್ಲಿ. ಶ್ಯಾನುಭೋಗರು ಕೃಷಿಕರಾದ ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಪ್ರಾಥಮಿಕದಿಂದ ಪ್ರೌಢಶಾಲೆಯವರೆವಿಗೂ ಮೇಟಿ ಕುರ್ಕೆಯಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಿಂದ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ. ನಂತರ ರಾಜಾಜಿನಗರದ ಶಿವನ ಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಉದ್ಯೋಗ ಆರಂಭ.

ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇವರು ಆಯ್ದುಕೊಂಡಿರುವ ಕ್ಷೇತ್ರವು ಬಹು ವಿಶಿಷ್ಟವಾದುದು. ಐತಿಹಾಸಿಕ ಮಹತ್ವ ಪಡೆದ, ಕಪ್ಪು ಜನಾಂಗ ಸೃಷ್ಟಿಸಿರುವ ಆತ್ಮಕಥೆಗಳು, ಸಾಹಿತ್ಯ, ಸಮಾಜ ಶಾಸ್ತ್ರೀಯ, ಸಾಂಸ್ಕೃತಿಕ ದೃಷ್ಟಿಯಿಂದ ಅಧ್ಯಯನ ಮಹತ್ವ ಪಡೆದಿವೆ. ಆಫ್ರಿಕನ್-ಅಮೆರಿಕನ್ ಮಹಿಳೆಯರು ಗುಲಾಮ ಗಿರಿಯ ವಿರುದ್ಧ ನಡೆಸಿದ ಹೋರಾಟದ ಅವರ ಆತ್ಮಕಥನಗಳು, ಆಫ್ರಿಕನ್ ಲೇಖಕಿಯರ ಸಾಹಿತ್ಯ ಮುಂತಾದುವನ್ನು ಪರಿಚಯಿಸುವ ಮಹತ್ಕಾರ‍್ಯ. ಆಫ್ರಿಕನ್ ಮಹಿಳೆಯರು ಬಿಡುಗಡೆಗಾಗಿ ನಡೆಸಿದ ಹೋರಾಟದ ಬದುಕಿನ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’, ‘ಉತ್ತರ ನಕ್ಷತ್ರ’ ಕೃತಿ ಬಿಡುಗಡೆಗೊಂಡಿದೆ. ಈ ಮಾಲಿಕೆಯಲ್ಲಿ ‘ನನ್ನ ಕಥೆ’ ಬಿಡುಗಡೆಗೆ ಸಿದ್ಧವಿದೆ.

ಇವರ ಪ್ರಕಟಿತ ಮೊದಲ ಕಾವ್ಯ ಕೃತಿ ಶಕುಂತಲೋಪಾಖ್ಯಾನ. ನಂತರ ಜಾಣೆ ಮತ್ತು ಇತರ ಕವಿತೆಗಳು. ಅನುವಾದ-ಕತ್ತಲ ಹೂವಿನ ಹಾಡು.
ಉರ್ದು ಕಮ್ಮಟಗಳಲ್ಲಿ ಪಾಲ್ಗೊಂಡು ಹಲವಾರು ಉರ್ದು ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಬಂಗಾಲಿ-ಕನ್ನಡ ಕಮ್ಮಟದಲ್ಲಿ ಭಾಗವಹಿಸಿ, ಬಂಗಾಲಿ ಕವನಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಇವರ ಕವಿತೆಗಳು ಇಂಗ್ಲಿಷ್, ಬಂಗಾಲಿ, ಮಲೆಯಾಳಂ, ಗುಜರಾತಿ, ಮರಾಠಿ ಭಾಷೆಗಳಿಗೂ ಭಾಷಾಂತರಗೊಂಡಿವೆ.

ಸಂದ ಪ್ರಶಸ್ತಿಗಳು-ಪಾಶ್ಚಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ ಸ್ವರ್ಣಪದಕ, ಶಕುಂತಲೋಪಾಖ್ಯಾನ ಕವನ ಸಂಕಲನಕ್ಕೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಜಾಣೆ ಮತ್ತು ಇತರ ಕವಿತೆಗಳಿಗೆ ಮತ್ತೊಮ್ಮೆ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿವೆ. ಕ್ಯಾಸೆಟ್ ಲೋಕದಲ್ಲಿ ಇವರ ಭಾವಗೀತೆಗಳ ‘ಭಾವವೀಣೆ’ಯ ಧ್ವನಿಸುರುಳಿಯು ಕವಯಿತ್ರಿಯರ ಮೊಟ್ಟಮೊದಲ ಕ್ಯಾಸೆಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.01 ( 5 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *