ಉಮಾಶ್ರೀ (ಮೇ ೧೦, ೧೯೫೭) ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು.
ಜೀವನ: ಉಮಾಶ್ರೀ ಅವರು ಮೇ ೧೦, ೧೯೫೭ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಜೀವನ ಬಡತನದ ಬವಣೆಯಲ್ಲಿ ಮೂಡಿ ಬಂದದ್ದು. “ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ” ಎಂದು ಅವರು ತಮ್ಮ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿದು ತಮ್ಮಿಬ್ಬರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಿರುವ ಉಮಾಶ್ರೀ ತಮ್ಮ ಬದುಕಿನ ಜವಾಬ್ಧಾರಿಗಳನ್ನು ಕೂಡಾ ಸಮರ್ಥವಾಗಿ ಪೂರೈಸಿದ್ದಾರೆ.
ರಂಗಭೂಮಿಯಲ್ಲಿ: ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ. ಅವರ ಒಡಲಾಳ ನಾಟಕದ ಸಾಕವ್ವನ ಅಭಿನಯ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.
“ನನ್ನನ್ನು ಅತ್ಯಂತವಾಗಿ ಕಾಡಿದ ಪಾತ್ರ ಶರ್ಮಿಷ್ಠೆಯದು” ಎಂದು ಉಮಾಶ್ರೀ ಒಂದು ಕಡೆ ಹೇಳಿದ್ದಾರೆ. “ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು”. ಹೀಗೆ ಹೇಳುವ ಉಮಾಶ್ರೀ ಗಮನಾರ್ಹ ಚಿಂತಕಿ. ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು.
ಚಲನಚಿತ್ರರಂಗದಲ್ಲಿ:‘ಅನುಭವ’ ಚಿತ್ರದಲ್ಲಿನ ಅವರ ಪಾತ್ರ ಕಾಶೀನಾಥರ ಹೊಸ ರೀತಿಯ ಒಂದು ಬೋಲ್ಡ್ ಪ್ರಯೋಗ. ಈ ಚಿತ್ರದಲ್ಲಿ ಉಮಾಶ್ರೀ ಅವರು ತೋರಿದ ಗಮನಾರ್ಹ ಅಭಿನಯ ನೆನಪಿನಲ್ಲಿ ಉಳಿಯುವಂತದ್ದು. ಆ ಪಾತ್ರದಲ್ಲಿ ಅವರ ಪಾತ್ರ ಹೇಗೇ ಇದ್ದರೂ ಅವರು ನೆನಪಲ್ಲಿ ಉಳಿದದ್ದು ಮಾತ್ರ ಆಕೆಯ ಅಭಿನಯ ಸಾಮರ್ಥ್ಯದಿಂದ. ಒಬ್ಬ ಕಲಾವಿದರು ತನಗೆ ನೀಡಿದ ಯಾವುದೇ ಪಾತ್ರದಲ್ಲೂ ತನ್ನನ್ನು ಅಡಗಿಸಿ, ತನ್ನ ಪಾತ್ರವನ್ನೂ ಅಡಗಿಸಿ ಕಲೆಯನ್ನು ಸುಗಮವಾಗಿ ಹೊರಚೆಲ್ಲುವ ವಿಶಿಷ್ಟ ಪರಿ ಇದು. ‘ಗೋಲ್ ಮಾಲ್ ರಾಧಾಕೃಷ್ಣ; ಎಂಬ ಚಿತ್ರದಲ್ಲಿ, ಉಮೇಶ್, ಸಿಹಿ ಕಹಿ ಚಂದ್ರು, ಮೈಸೂರು ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅನಂತನಾಗ್ ಇವರುಗಳ ಸುತ್ತ ತಿರುಗುವ ಕತೆಯಲ್ಲಿ, ಹಲವೊಮ್ಮೆ ಅಲ್ಲಿನ ಹಾಸ್ಯ ಸನ್ನಿವೇಶ ಮೇರೆ ಮೀರಿದ್ದು ಎಂದು ಭಾವ ಕೊಡುತ್ತಿದ್ದರೂ ಕೂಡ, ಉಮಾಶ್ರೀ ತಮ್ಮ ಪಾತ್ರಕ್ಕೆ ನೀಡುವ ಹೊಳಪು ನೆನಪಲ್ಲಿ ಉಳಿಯುವಂತದ್ದು.
ಶ್ರೇಷ್ಠ ಕಲಾವಿದೆ: ನಾಟಕ ರಂಗ ಕೊಡುವ ವೈವಿಧ್ಯತೆಯನ್ನು ದುರದೃಷ್ಟವಶಾತ್ ಚಿತ್ರರಂಗ ಮತ್ತು ದೂರದರ್ಶನ ನೀಡಲು ಆಶಕ್ಯವಾಗಿವೆ. ಇಲ್ಲಿ ಎಲ್ಲವೂ ಜೆರಾಕ್ಸ್ ಕಾಪಿಯಂತೆ ನಡೆದು ಬಿಡಬೇಕು. ಹೀಗಾಗಿ ಇಲ್ಲಿನ ಕಲಾವಿದರು ಅದರಲ್ಲೂ ಪೋಷಕ ಪಾತ್ರದವರು ಟೈಪ್ ಕಾಸ್ಟ್ ಆಗಿ ಸವೆದು ಹೋಗುವುದೇ ಹೆಚ್ಚು. ಅತ್ಯಂತ ಆಳವಾದ ಸಾಮರ್ಥ್ಯವುಳ್ಳವರು ಮಾತ್ರವೇ ಸಿಕ್ಕ ಒಂದೆರಡು ಮುತ್ತಿನ ಅವಕಾಶಗಳನ್ನೇ ಹಾದಿಗಳನ್ನಾಗಿ ಪರಿವರ್ತಿಸಿಕೊಳ್ಳುವ ಸಂಯಮ ತೋರುತ್ತಾರೆ. ಉಮಾಶ್ರೀ ಅಂತಹ ಶ್ರೇಷ್ಟ ಕಲಾವಿದರ ಸಾಲಿಗೆ ಸೇರುವವರು.
ಉಮಾಶ್ರೀ ಅವರ ಪಾತ್ರಗಳು
- ‘ಪುಟ್ನಂಜ’ ಚಿತ್ರದ ಮುದುಕಿ ಪಾತ್ರ;
- ‘ಕೋತಿಗಳು ಸಾರ್ ಕೋತಿಗಳು’ ಚಿತ್ರದಲ್ಲಿನ ಮುನಿಯಮ್ಮ ಪಾತ್ರ;
- ವಿಷ್ಣು – ಅಂಬರೀಶ್ ಇಬ್ಬರಿಗೂ ಹಿರಿಯಳಾಗಿ ಮೂಡಿದ ‘ದಿಗ್ಗಜರು’ ಚಿತ್ರದ ಪಾತ್ರ;
- ಸಂಗ್ಯಾಬಾಳ್ಯ, ಕೊಟ್ರೇಶಿ ಕನಸು, ಯಾರಿಗೆ ಸಾಲುತ್ತೆ ಸಂಬಳ ಹೀಗೆ ಹಲವು ತಕ್ಷಣಕ್ಕೆ ನೆನಪಿಗೆ ಬರುವ ಪಾತ್ರಗಳು ಆಕೆಯ ವಿಶಾಲ ವ್ಯಾಪ್ತಿಯ ಕುರುಹುಗಳನ್ನು ತೋರುತ್ತವೆ.
- ಯಾವುದೇ ತಾಯಿಯ ಪಾತ್ರಕ್ಕೂ ಅವರು ಜೀವ ತುಂಬುತ್ತಿದ್ದ ಶೈಲಿ ಶ್ಲಾಘನೀಯವಾದುದಾಗಿದೆ. ತಮ್ಮೇಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಕನ್ನಡ ಚಿತ್ರರಸಿಕರ ಕಣ್ಮಣಿಯಾಗಿದ್ದಾರೆ. ಅವರ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ.
ರಾಷ್ಟ್ರಪ್ರಶಸ್ತಿ
ಉಮಾಶ್ರೀ ಅವರಿಗೆ ‘ಗುಲಾಬಿ ಟಾಕೀಸ್’ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟ ಮಹಾನ್ ದಿಗ್ದರ್ಶಕ ಗಿರೀಶ್ ಕಾಸರವಳ್ಳಿ, ಅವರು ಆಕೆಗೆ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಕಲಾಭಿಮಾನಿಗಳ ಪ್ರಶಸ್ತಿ ದೊರಕುವಂತಹ ಪಾತ್ರ ಕೊಟ್ಟು ಸೊಗಸಾದ ಅಭಿನಯ ಹೊರಹೊಮ್ಮುವಂತೆ ಮಾಡಿದ್ದಾರೆ. ಕಾಸರವಳ್ಳಿಯವರ ‘ಕನಸೆಂಬ ಕುದುರೆಯನ್ನೇರಿ’ ಚಿತ್ರದಲ್ಲೂ ಉಮಾಶ್ರೀ ನಟಿಸಿದ್ದಾರೆ.
ಸಮಾಜಸೇವೆ ಮತ್ತು ರಾಜಕಾರಣದಲ್ಲಿ: ಸಮಾಜಸೇವೆ ಮತ್ತು ರಾಜಕೀಯದಲ್ಲೂ ತಮ್ಮ ಚಟುವಟಿಕೆಗಳನ್ನು ಹರಡಿಕೊಂಡಿರುವ ಉಮಾಶ್ರೀ, ಸಿನಿಮಾ, ದೂರದರ್ಶನಗಳಲ್ಲಿನ ಹಲವು ಪಾತ್ರಗಳಲ್ಲಿ ಎಡೆಬಿಡದೆ ಮುನ್ನಡೆಯುತ್ತಿದ್ದಾರೆ. 2013ರ ವರ್ಷದಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದ್ದಾರೆ.
ದಿಟ್ಟತನ: ಚಿತ್ರರಂಗವೆಂಬ ಬಣ್ಣ ಬಣ್ಣದ ಹಿಂದಿನ ಬದುಕಿನಲ್ಲಿ ಕೆಲವೊಂದು ಜನರ ಬದುಕು ಮಾತ್ರ ಶ್ರೀಮಂತವಾಗಿ ಕಾಣುತ್ತವೆ. ಓಹೋ ಇವರು ಪ್ರಧಾನ ಕಲಾವಿದರು ಎಂದು ನಾವಂದುಕೊಳ್ಳುತ್ತಿರುವಂತೆಯೇ ಅವರ ಹಲವಾರು ಭೀಕರ ಬದುಕಿನ ಕ್ಷಣಗಳೂ ಮಾಧ್ಯಮಗಳಲ್ಲಿ ರಾಚುತ್ತಿರುತ್ತವೆ. ಅನೇಕ ಪ್ರಸಿದ್ಧ ಕಲಾವಿದರು ತಮ್ಮ ಬದುಕನ್ನು ವಿಚಿತ್ರ ರೀತಿಯಲ್ಲಿ ಕೊನೆಗಾಣಿಸಿಕೊಂಡಿರುವ ಕ್ಷೇತ್ರ ಸಿನಿಮಾ ಉದ್ಯಮ. ಕಷ್ಟಗಳ ಕೋಟಲೆಗಳಲ್ಲಿ ಬೆಳೆದು ಬಂದ ‘ಉಮಾಶ್ರೀ’ ತನ್ನ ದಿಟ್ಟತನದಿಂದ ಚಿತ್ರರಂಗದ ಬದುಕನ್ನು ಉನ್ನತ ಸಾಧನೆಯವರೆಗೆ ನಡೆಸಿರುವ ರೀತಿ ಮೆಚ್ಚುವಂತದ್ದು.