Alampur Temples

ಬಾದಾಮಿ ಚಾಲುಕ್ಯರು : ಆಲಂಪುರದ ದೇವಾಲಯಗಳು

ಈಗ ಕರ್ನಾಟಕದ ಹೊರಗೆ ಇರುವ, ಹಿಂದೆ ಚಾಲುಕ್ಯರ ರಾಜ್ಯದ ಭಾಗವಾಗಿದ್ದ ಈಗಿನ ಆಂಧ್ರಪ್ರದೇಶದ ಮಹಬೂಬ್‌ನಗರ ಮತ್ತು ಕರ್ನೂಲುಗಳಲ್ಲಿ ಚಾಲುಕ್ಯರು ಕಟ್ಟಿಸಿದ ಆಲಯಗಳಿವೆ. ಇವುಗಳಲ್ಲಿ ಪ್ರಮುಖವಾದವು ತುಂಗಭದ್ರೆಯ ದಕ್ಷಿಣ ತೀರದಲ್ಲಿ ಮಹಬೂಬ್ ನಗರ ಜಿಲ್ಲೆಗೆ ಸೇರಿದ ಆಲಂಪುರದ ದೇವಾಲಯ ಸಂಕೀರ್ಣ. ಇದು ಶ್ರೀಶೈಲಕ್ಕೆ ಹೋಗಲು ಪಶ್ಚಿಮದ್ವಾರದಂತಿದೆ. ಇಲ್ಲಿಯ ಮುಖ್ಯ ದೇವತೆ ಜೋಗುಳಾಂಬಾ. ಪರಶುರಾಮನು ತನ್ನ ತಾಯಿ ರೇಣುಕೆಯ ಶಿರಚ್ಛೇದನ ಇಲ್ಲಿ ಮಾಡಿದ ಎಂಬುದು ಇನ್ನೊಂದು ದಂತಕಥೆ. ಬೃಹಸ್ಪತಿ ಎಂಬ ಸ್ಥಪತಿಯ ಪತ್ನಿ ಪುಣ್ಯವತಿ. ಇಬ್ಬರೂ ಕಾಶಿವಿಶ್ವೇಶ್ವರ ಭಕ್ತರು. ದೇವನ ಕೃಪೆಯಿಂದ ಪುಣ್ಯವತಿ ಗರ್ಭ ಧರಿಸಿದಳು. ಮಗನನ್ನು ಸ್ಥಪತಿ ನೋಡುವುದಿಲ್ಲವೆಂದು ದೇವ ಹೇಳಿದ್ದಂತೆಯೇ ಬೃಹಸ್ಪತಿಯು ಅಕಾಲ ಮರಣಕ್ಕೆ ತುತ್ತಾದ. ಗೋಳಕನಾಗಿ ಜನಿಸಿದ ಮಗ ಬಹುಮುಖ ಪ್ರತಿಭಾವಂತ ರಸಸಿದ್ಧನಾದ. ಆಲಂಪುರಕ್ಕೆ ಬಂದು ನೆಲಸಿ ಅಧ್ಯಾತ್ಮ ಕೇಂದ್ರವನ್ನಾಗಿ ರೂಪಿಸಿದ. ಸುವರ್ಣರಸವಿದ್ಯೆ ಕೈವಶ ಮಾಡಿಕೊಂಡಿದ್ದ ಸಿದ್ಧ ವಿದ್ಯಾಲಯವನ್ನು ನಿರ್ಮಿಸಿ, ಅನೇಕ ದೇವಾಲಯಗಳನ್ನು ನಿರ್ಮಿಸಿದ. ಕೋಟೆಯೊಂದನ್ನು ನಿರ್ಮಿಸಿಕೊಂಡು ಇದು ಶಿಲ್ಪಿಗಳ ಕೇಂದ್ರವಾಗಿ ರೂಪಿಸಿದ. ಆಲಂಪುರದ ಪ್ರಖ್ಯಾತಿ ವಿಶೇಷವಾಗಿ ಹರಡಿತು. ಶಿಲ್ಪ-ವಿಜ್ಞಾನಗಳು ಮೇಳೈಸಿ ಅಧ್ಯಾತ್ಮದ ಸಾಧನೆಗೆ ತೊಡಗಿಸಿದಾಗ ಈ ರೀತಿಯ ಖ್ಯಾತಿ ವಿಶೇಷವೇನೂ ಅಲ್ಲ. ಇದೇ ಸ್ವತಂತ್ರವಾದ ಭಾಗದಂತೆ ರೂಪುಗೊಂಡಿತು. ಸ್ಥಳೀಯ ಅರಸನಾದ ವಿಲಸದ್ರಾಜನ ಇದನ್ನು ಸಹಿಸಲಿಲ್ಲ. ರಸಸಿದ್ಧನ ಬಳಿ ಇದ್ದ ‘ರಸ’ದ ಮಡಿಕೆಯನ್ನು ತನ್ನ ವಶ ಮಾಡಿಕೊಳ್ಳಬೇಕೆಂದು ಪ್ರಯತ್ನಿಸಿದ. ಇದರ ಫಲವಾಗಿ ರಸಸಿದ್ಧರು ಶಿಲ್ಪಿಗಳು ಸತ್ತರು. ಆದರೆ ರಸದ ಪಾತ್ರೆ ದಕ್ಕಲಿಲ್ಲ. ಬ್ರಹ್ಮಹತ್ಯಾಪಾತಕದಿಂದ ಅರಸ ಪೀಡಿತನಾಗಿ ಇಲ್ಲಿಯ ಆಲಯಗಳನ್ನು ಪುನರುಜ್ಜೀವನಗೊಳಿಸಿದ. ಇದು ಇನ್ನೊಂದು ದಂತಕಥೆ.

ಆಲಂಪುರದಲ್ಲಿ ಪೂರ್ವಾಭಿಮುಖವಾಗಿರುವ ಪದ್ಮಬ್ರಹ್ಮ, ಸ್ವರ್ಗಬ್ರಹ್ಮ, ಗರುಡಬ್ರಹ್ಮ, ಬಾಲಬ್ರಹ್ಮ, ವಿಶ್ವಬ್ರಹ್ಮ, ವೀರಬ್ರಹ್ಮ, ಅರ್ಕಬ್ರಹ್ಮ, ಕುಮಾರಬ್ರಹ್ಮ ಮತ್ತು ತಾರಕ ಬ್ರಹ್ಮ ಎಂದು ಕರೆಯಲಾಗುವ ಒಂಬತ್ತು ಗುಡಿಗಳಿವೆ. ವೀರಬ್ರಹ್ಮ ಗುಡಿಯ ವಿನಾ ಉಳಿದೆಲ್ಲವೂ ಅಲಂಕೃತವಾದ ದೇವಾಲಯಗಳು. ಬಾಲಬ್ರಹ್ಮಗುಡಿಯ ಉತ್ತರದಲ್ಲಿ ಅಶ್ವತ್ಥಕಟ್ಟೆಯ ಪಕ್ಕದಲ್ಲಿರುವ ಕುಮಾರಬ್ರಹ್ಮ ಅತಿ ಪ್ರಾಚೀನವಾದುದ್ದು ಎನಿಸುತ್ತದೆ. ಇಲ್ಲಿಯ ಕಂಭಗಳಲ್ಲಿ ಒಂದು ಮಾದರಿಯ ಪೂರ್ಣಕುಂಭ ಮತ್ತು ಕಮಲದ ಬೋದಿಗೆ ಪಡೆದಿದೆ. ಇನ್ನೊಂದು ಮಾದರಿಯಲ್ಲಿ ‘ಬುಡದಲ್ಲಿ ಗಜಲಕ್ಷ್ಮಿ, ಮೇಲೆ ಅರ್ಧವೃತ್ತಾಕಾರದ ಕಮಲ, ತೆಳುವಾದ ಕಾಂಡದ ಮೇಲೆ ವೃತ್ತಾಕಾರದ ಪದರಗಳಿವೆ ದ್ವಾರದ ಎರಡೂ ಕಡೆ ಜಾಲಂಧ್ರಗಳು ಮಂಟಪದ ಮುಂದಿನ ಸಾಲಿನ ಕಂಭಗಳ ಮೇಲೆ ತೊಲೆಯಲ್ಲಿ ಏಳು ಮಾನವಶಿರಗಳು ಇವೆ.

ಬಾಲಬ್ರಹ್ಮ ದೇವಾಲಯ ಈಗಲೂ ಪೂಜೆ ಕೈಗೊಳ್ಳುತ್ತಿರುವ ದೇವಾಲಯ. ಗರ್ಭಗುಡಿ, ಅಂತರಾಳ, ಮಂಟಪಗಳನ್ನು ಒಳಗೊಂಡಿದೆ. ಮುಚ್ಚಿದ ಪ್ರದಕ್ಷಿಣಾಪಥದ ಹೊರಗೆ ತೆರೆದ ಪ್ರದಕ್ಷಿಣಾಪಥ, ಮುಖಮಂಟಪ ದ್ವಾರ ಮತ್ತು ಪ್ರಾಕಾರಗಳಿವೆ. ಇದರ ಸ್ಥಪತಿ ಈಶಾನಾಚಾರ್ಯ. ವಿಜಯಾದಿತ್ಯ (ಕ್ರಿ.ಶ. ೭೧೪) ಈ ದೇವಾಲಯವನ್ನು ನಿರ್ಮಿಸಿದ. ಹೊರಗಿನ ಪ್ರದಕ್ಷಿಣಾ ಪಥಕ್ಕೆ ಹೊಂದಿಕೊಂಡು ಉತ್ತರ-ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ತಗ್ಗಾದ ಕೈಪಿಡಿ ಗೋಡೆ ಇದ್ದು ಹೊರಮುಖವನ್ನು ಅಂಕಣಗಳಾಗಿ ವಿಂಗಡಿಸಿ ಒಂದೊಂದರ ಸೂರಿನಲ್ಲಿ ಕಮಲವನ್ನು ಅಲಂಕರಿಸಿಲಾಗಿದೆ. ಪೂರ್ವದಿಕ್ಕಿನ ಕೋಷ್ಠಗಳಲ್ಲಿ ಮಹಿಷಾಸುರ ಮರ್ದಿನಿ, ಆಲಿಂಗನಮೂರ್ತಿ, ವೀರಭದ್ರ, ಸಪ್ತಮಾತೃಕೆಯರು, ಕಾರ್ತಿಕೇಯ ಶಿಲ್ಪಗಳ ಅಲಂಕರಣವಿದೆ.

ಜೋಗುಳಾಂಬ ಮಂಟಪದಲ್ಲಿ ದೇವತೆಗಳ ವಿಗ್ರಹಗಳನ್ನೂ ಅಳವಡಿಸಲಾಗಿದೆ. ಎರಡನೆಯ ದ್ವಾರ ದಾಟಿ ಬಂದರೆ ರಂಗಮಂಟಪ ಮತ್ತು ಒಳಗಿನ ಪ್ರದಕ್ಷಿಣಾ ಪಥಗಳಿವೆ. ಗರ್ಭಗೃಹದ ದ್ವಾರಬಂಧದಲ್ಲಿ ದ್ರಾವಿಡ ಶೈಲಿಯ ಕುಂಭ ಶಾಲಾ ಪಂಜರಗಳಿವೆ. ಪಕ್ಕದ ಹೊರಗೋಡೆಗಳಲ್ಲಿ ರಸಸಿದ್ಧ, ಗಣಪತಿ, ಆಲಿಂಗನಮೂರ್ತಿ ಮತ್ತು ದುರ್ಗಾದೇವಿಯ ವಿಗ್ರಹಗಳಿವೆ.

ಕುಮಾರ ಬ್ರಹ್ಮ ಗುಡಿಯ ಉತ್ತರಕ್ಕೆ ಇರುವ ಮೂರು ಗುಡಿಗಳಲ್ಲಿ ಅರ್ಕಬ್ರಹ್ಮಾಲಯ ವನ್ನು ಚಾಲುಕ್ಯ ವಿಕ್ರಮಾದಿತ್ಯನ ಹಿರಿಯ ಪಟ್ಟದರಾಣಿ ಕಟ್ಟಿಸಿದಳು. ಶ್ರೀಕಂಠಾಚಾರ್ಯ, ಮಚ್ಚರಿಪರಪರಮೇಶ್ವರ, ಸಂಸಾರಭೀತ ಮುಂತಾದ ಹೆಸರು, ಬಿರುದುಗಳುಳ್ಳ ಶಿಲ್ಪಿಗಳ ಹೆಸರುಗಳನ್ನು ಅಲ್ಲಲ್ಲಿ ಕಂಡರಿಸಲಾಗಿದೆ. ವಿಮಾನ, ರಂಗಮಂಟಪದ ಚಾವಣಿಗಳು ಈಗಿಲ್ಲ. ಒಳಭಾಗ ಜೀರ್ಣೋದ್ಧಾರಗೊಂಡಿದೆ. ಕಂಭಗಳ ಮೇಲೆ ಅರ್ಧವೃತ್ತಾಕಾರದ ಕಮಲದ ಮುದ್ರಿಕೆಗಳನ್ನು ಕಂಡರಿಸಿದ್ದಾರೆ. ಇದರ ಪಕ್ಕದ ವೀರಬ್ರಹ್ಮ ದೇವಾಲಯವು ನಿರಾಡಂಬರವಾದುದು. ಇದರ ವಿಮಾನದ ಸುಕನಾಸಿಯಲ್ಲಿ ನಟರಾಜನ ವಿಗ್ರಹವಿದೆ.

ವಿಶ್ವಬ್ರಹ್ಮಾಲಯದಲ್ಲಿ ಗರ್ಭಗೃಹ, ಅಂತರಾಳ, ಮಂಟಪ, ಸೂರಿನಿಂದ ಮುಚ್ಚಿರುವ ಪ್ರದಕ್ಷಿಣಾಪಥ, ಇವನ್ನು ಆವರಿಸಿರುವ ಪ್ರಾಕಾರ ಗೋಡೆಗಳಿವೆ. ಮುಖ್ಯದ್ವಾರದ ಹಿಂಭಾಗಗಳ ಎರಡು ಕಡೆಗಳ ಕೋಷ್ಠಗಳಿಗೆ ಮುಂಚಾಚಿದ ಮಂಟಪವಿದೆ. ದಕ್ಷಿಣ ಮತ್ತು ಉತ್ತರದ ಗೋಡೆಗಳಲ್ಲಿ ಒಂದೊಂದರಲ್ಲೂ ಏಳು ಕೋಷ್ಠಗಳಿದ್ದರೂ ಮೂರರಲ್ಲಿ ಮಾತ್ರವೇ ವಿಗ್ರಹಗಳಿವೆ. ಮಂಟಪದ ಒಳಗಿನ ಕಂಬಗಳಲ್ಲಿ ನಾಲ್ಕು ಸಿಂಹಗಳಿದ್ದ ಮೇಲಿನ ಕಾಂಡವನ್ನು ಹನ್ನೆರಡು ಅರೆಗೊಳವಿಗಳಾಗಿ ರೂಪಿಸಲಾಗಿದೆ. ಅದರ ಮೇಲೆ ಕಮಲಗಳು, ಆಮಲಕ, ಸಿಂಹಮುಖದ ಬೋದಿಗೆಗಳಿವೆ. ಬೋದಿಗೆಗಳಲ್ಲಿ ಮುಂಚಾಚಿರುವ ಸಿಂಹ ಅಥವಾ ಹನ್ನೆರಡು ಅರಗೊಳವಿದಳಗಳಾಗಿ, ಇಳಿಬಿಟ್ಟ ಕಮಲದ ಸುರಳಿಗಳು ಇವೆ. ಗರ್ಭಗೃಹದಲ್ಲಿ ನಾಲ್ಕು ಕಂಭಗಳ ನಡುವಣ ವೇದಿಕೆಯ ಮೇಲೆ ಲಿಂಗವಿದೆ.

ಆಲಂಪುರದಲ್ಲಿ ಪ್ರಧಾನವಾಗಿ ಕಾಣಿಸುವುದು, ಎಲ್ಲಾ ಗರ್ಭಗೃಹಗಳಲ್ಲಿ ಇರುವುದು ಲಿಂಗಗಳೇ. ಇಲ್ಲಿ ಅಸಂಖ್ಯಾತ ಲಿಂಗಗಳು ಪ್ರತಿಷ್ಠಿತವಾಗಿವೆ. ಆದರೆ ಯಾವ ಎರಡು ಲಿಂಗಗಳು ಒಂದೇ ಆಕಾರ, ಬಣ್ಣ, ಎತ್ತರ, ಸುತ್ತಳತೆಗಳನ್ನು ಪಡೆದಿಲ್ಲ. ದೇವಾಲಯಗಳ ಹೆಸರು ಒಂಬತ್ತಾಗಿದ್ದರೂ, ಬ್ರಹ್ಮ ಎಂದು ಕರೆದಿದ್ದರೂ ಪ್ರತಿಷ್ಠಿತವಾಗಿರುವುದು ಬಗೆಬಗೆಯ ಆಕಾರದ ಬಣ್ಣದ ಲಿಂಗಗಳೇ.

ಗರುಡ ಬ್ರಹ್ಮ ಗುಡಿಯಲ್ಲಿ ಗರ್ಭಗೃಹ, ಅಂತರಾಳ, ಮಂಟಪ, ಪ್ರದಕ್ಷಿಣಾ ಪಥಗಳಿವೆ. ಅಂತರಾಳದ ದ್ವಾರದಲ್ಲಿ ಅಪ್ಸರೆಯರಿದ್ದಾರೆ. ಅದರ ಮೇಲಿನ ತೊಲೆಯಲ್ಲಿ ಆಮಲಕ, ಶಿಖರ, ಪಂಜರಗಳ ಅಲಂಕಾರವಿದೆ.

ಇದರ ಹಿಂದೆ ಚಾಲುಕ್ಯರ ವಿನಯಾದಿತ್ಯನ ಪಟ್ಟದ ರಾಣಿ ಕಟ್ಟಿಸಿರುವ ಸ್ವರ್ಗಬ್ರಹ್ಮಗುಡಿ. ಮುಖಮಂಟಪದ ಎರಡೂ ಕಡೆ ಮೃಗ ಶರೀರಗಳಾದ ದ್ವಾರಪಾಲಕರಿದ್ದಾರೆ. ಗೋಡೆಯ ಕೋಷ್ಠಗಳಲ್ಲಿ ಗಂಗಾವತರಣ, ತ್ರಿಪುರಾಂತಕ, ನಟರಾಜ, ತ್ರಿವಿಕ್ರಮ, ಲಿಂಗೋದ್ಭವ ಮೂರ್ತಿಗಳ ಶಿಲ್ಪಗಳಿವೆ. ಅಧಿಷ್ಠಾನದ ತಂತ್ರಗಳಲ್ಲಿ ಸಂಗೀತ ಲೋಲುಪರಾದ ಗಣಗಳು, ಗೋಡೆಗಳ ಮೇಲ್ಮಟ್ಟದಲ್ಲಿ ಶಿಲ್ಪಗಳು, ಮಂಟಪದ ಕಂಭಗಳ ತುದಿಗಳಲ್ಲಿ ಪೂರ್ಣಕುಂಭ ಮತ್ತು ಸಿಂಹಲಲಾಟ ಇತ್ಯಾದಿ ಅಲಂಕರಣಗಳಿವೆ.

ಆಲಂಪುರದ ಕೋಟೆಯ ಗೋಡೆಯಲ್ಲಿ ಶಿಲ್ಪಿಗಳ ಕುಲದೇವತೆ ಎಂದು ಖ್ಯಾತಳಾಗಿರುವ ಕಾಂಚಿಪುರದ ಕಾಮಾಕ್ಷಿ ದೇವಿಯ ಆಲಯವನ್ನು ಕೋಷ್ಠಕ ರೂಪದಲ್ಲಿ ನಿರ್ಮಿಸಿ ಪ್ರತಿಷ್ಠಿಸಲಾಗಿದೆ. ಈ ಸೇವೆಯು ಆಲಂಪುರದ ಅರಸನ ಮಂತ್ರಿಯದು ಎಂದು ಹೇಳುವ ಶಾಸನವೂ ಅಲ್ಲಿದೆ. ಕಾಂಚಿಪುರದ ಕಾಮಾಕ್ಷಿದೇವಿಯ ಬಗ್ಗೆ ಇರುವ ಐತಿಹ್ಯವನ್ನು ಒಳಗೊಂಡು ೧೫೨೦ರಲ್ಲಿ ನಿರಂಜನ ಕವಿಯಿಂದ ರಚಿತವಾದ ‘ಕಂಚಿಪುರಾಣ’ ಕಾವ್ಯವು ಕಾಂಸ್ಯ ಶಿಲ್ಪಗಳು ದಕ್ಷಿಣ ಭಾರತಕ್ಕೆ ಬಂದುದನ್ನು ವಿವರಿಸುತ್ತದೆ. ಅಲ್ಲಿ ವಿವರಿತವಾಗಿರುವಂತಹ ಮತ್ತು ಪ್ರಸ್ತುತ ಕಾಂಚಿ ನಗರದಲ್ಲಿ ಶಿಲ್ಪಿ ಬ್ರಾಹ್ಮಣರು ಅರ್ಚನೆ ಮಾಡುತ್ತಿರುವ ಕಾಮಾಕ್ಷಿ ದೇವಾಲಯದಲ್ಲಿರುವ ಮೂರ್ತಿಯ ಪ್ರತಿಕೃತಿ ಇಲ್ಲಿ ಪ್ರತಿಷ್ಠಾಪಿತವಾಗಿದೆ. ಇದರಿಂದ ರಸಸಿದ್ಧನ ದಂತಕಥೆಗೆ ಹೆಚ್ಚಿನ ಮೌಲ್ಯವಿದೆ ಎಂದು ಭಾಸವಾಗುತ್ತದೆ.

ಆಲಂಪುರದ ಆಲಯಗಳ ಲಕ್ಷಣಗಳನ್ನು ಗಮನಿಸಿದಾಗ ಕೆಲವು ವೈಶಿಷ್ಟ್ಯಗಳು ಕಂಡುಬರುತ್ತವೆ. ಸ್ಥೂಲಾಕಾರ, ಪಾರ್ಶ್ವದಿಂದ ಕಾಣುವ ಉನ್ನತಿ, ಗರ್ಭಗೃಹ ಮತ್ತು ಮಂಟಪಗಳ ಸ್ತಂಭಸಾಲು ವಿಮಾನ ಮತ್ತು ಗೂಢ ಮಂಟಪಗಳನ್ನು ಸಮರೇಖೆಯಲ್ಲಿ ಕೂಡಿಸಿ ಸುಕನಾಸಿಯನ್ನು ರೂಪಿಸಿರುವುದು. ಅಲಂಕರಣಕ್ಕೆ ಆಸರೆಯಾಗಿ ಮೂಡಿ ಬಂದ ಶಿಲ್ಪಕಲೆಯ ಅಂತರ್ಭಾವ, ಮೇಲು ಪಾಯ, ಗೋಡೆಗಳು, ಭಿತ್ತಿ ಮತ್ತು ಮಾಳಿಗೆ ರಚನೆಯಲ್ಲಿ ಸಾಮರಸ್ಯ ಮೂಡಿಸಲು ಅನುಸರಿಸುವ ರಚನಾ ತಂತ್ರ, ಒಳಮುಖವಾಗಿ ಮತ್ತು ಹೊರಮುಖವಾಗಿ ಕಾಣಿಸುವ ದೇವಾಲಯದ ಒಟ್ಟು ಆಕಾರ-ವಿನ್ಯಾಸ ಇವು ಚಾಲುಕ್ಯ ಗುಹಾಲಯಗಳಿಂದಲೇ ಮೂಡಿಬಂದಿವೆ. ಐಹೊಳೆಯ ಗುಡಿಗಳ ಸ್ಥೂಲ ರಚನೆ ಹಾಗೂ ವಿಮಾನಗಳ ಶೈಲಿ ಇಲ್ಲಿ ಪರಿಣಾಮಕಾರಿಯಾಗಿ ಕಾಣಿಸಿಕೊಂಡಿವೆ. ಚಾಲುಕ್ಯ ಅರಸರಿಂದ ಅವರ ರೂವಾರಿಗಳಿಂದಲೇ ಇವು ನಿರ್ಮಿತವಾಗಿರುವುದು ಎಂಬುದೂ ಇದಕ್ಕೆ ಪ್ರಧಾನ ಕಾರಣ.

ಪುಸ್ತಕ: ಬಾದಾಮಿ ಚಾಲುಕ್ಯರು
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

Review Overview

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *