Wednesday , 22 May 2024
R. Nagaratnamma

ಆರ್. ನಾಗರತ್ನಮ್ಮ

ಆರ್. ನಾಗರತ್ನಮ್ಮ (ಜೂನ್ ೨೧, ೧೯೨೬ – ಅಕ್ಟೋಬರ್ ೭, ೨೦೧೨) ಅವರ ಹೆಸರು ಕನ್ನಡ ವೃತ್ತಿರಂಗಭೂಮಿಯ ಪ್ರತಿಷ್ಠಿತವಾಗಿ ರಾರಾಜಿಸುತ್ತಿರುವಂತದ್ದು. ೧೯೫೮ರಲ್ಲಿ ಸ್ತ್ರೀ ನಾಟಕ ಮಂಡಳಿ ಎಂಬ ಹೊಸ ಪರಿಕಲ್ಪನೆಯೊಂದಿಗೆ ನಾಗರತ್ನಮ್ಮನವರು ಸಂಪೂರ್ಣ ಮಹಿಳೆಯರೇ ನಿರ್ವಹಿಸುವ, ಅಭಿನಯಿಸುವ ನಾಟಕ ತಂಡವನ್ನು ಕಟ್ಟಿ ಆ ಮೂಲಕ ಕರ್ನಾಟಕ ರಂಗಭೂಮಿಯಲ್ಲಿ ಒಂದು ಹೊಸ ಚರಿತ್ರೆಯನ್ನು ದಾಖಲಿಸಿದವರು. ಕೃಷ್ಣಗಾರುಡಿ ನಾಟಕದಲ್ಲಿ ಭೀಮ, ಶ್ರೀ ಕೃಷ್ಣಲೀಲೆಯಲ್ಲಿ ಕಂಸ, ರಾಮಾಯಣದಲ್ಲಿ ದಶರಥ ಮತ್ತು ರಾವಣ, ದಾನಶೂರ ಕರ್ಣದಲ್ಲಿ ದುರ್ಯೋಧನ ಮತ್ತು ಇನ್ನಿತರ ಪಾತ್ರಗಳಲ್ಲಿ ನಟಿಸಿರುವ ನಾಗರತ್ನಮ್ಮನವರ ಅಭಿನಯವನ್ನು ಇಂದಿಗೂ ಜನ ಪ್ರೀತಿ ಮೆಚ್ಚುಗೆಗಳಿಂದ ಸ್ಮರಿಸುತ್ತಾರೆ. ದೇಶದ ಇತರ ನಗರಗಳಲ್ಲೂ ನಾಟಕಗಳನ್ನು ಪ್ರದರ್ಶಿಸಿರುವ ನಾಗರತ್ನಮ್ಮನವರಿಗೆ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಲಭಿಸಿದ್ದವು.

ಆರ್ ನಾಗರತ್ನಮ್ಮನವರು ೧೯೨೬ರ ವರ್ಷದ ಜೂನ್ ೨೧ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಕೃಷ್ಣಭಟ್ಟರು, ತಾಯಿ ರುಕ್ಮಿಣಮ್ಮನವರು.

ವೃತ್ತಿರಂಗಭೂಮಿಯಲ್ಲಿ

ಓದಿಗಿಂತ ಎಳೆ ವಯಸ್ಸಿನಿಂದಲೇ ರಂಗಭೂಮಿಯತ್ತ ಬೆಳೆದ ಮನಸ್ಸು ಅವರದು. ಕಲಾ ಸೇವಾ ಮಂಡಲಿಯ ಮೂಲಕ ರಂಗಭೂಮಿ ಪ್ರವೇಶಿಸಿದ ನಾಗರತ್ನಮ್ಮನವರು ರಾಜಕುಮಾರ್‌ ಅಂತಹ ದಿಗ್ಗಜರೊಡನೆಯೂ ಅಭಿನಯಿಸಿದ್ದರು. ಮಂಜುನಾಥ ಕೃಪಾ ಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರ ಮಂಡಲಿ, ಎಂ.ವಿ. ಸುಬ್ಬಯ್ಯನಾಯ್ಡು ಅವರ ಕಂಪನಿ, ಹೀಗೆ ಹಲವಾರು ಕಂಪನಿಗಳಿಗಾಗಿ ನಾಗರತ್ನಮ್ಮನವರು ರಾಜ್ಯಾದ್ಯಂತ ತಿರುಗಾಡಿ ಅಭಿನಯಿಸಿದ ನಾಟಕಗಳು, ಪ್ರದರ್ಶನಗಳಿಗೆ ಲೆಕ್ಕವಿಲ್ಲ. ನಂತರ ಪುರುಷ ಪಾತ್ರಗಳಿಗೆ ಜೀವ ತುಂಬಿದ ಅವರ ಅಭಿನಯ ಅತ್ಯಂತ ಜನಪ್ರಿಯವೆನಿಸಿತ್ತು. ಕೃಷ್ಣಲೀಲೆಯ ಕೃಷ್ಣ, ಕೃಷ್ಣಗಾರುಡಿಯ ಭೀಮಸೇನನೇ ಅಲ್ಲದೆ, ಸುಭದ್ರಾಪರಿಣಯದ ಬಲರಾಮ, ಬೇಡರ ಕಣ್ಣಪ್ಪದ ಕಣ್ಣಪ್ಪ, ಸದಾರಮೆಯ ಕಳ್ಳ, ಸಂಸಾರ ನೌಕೆಯ ಸುಂದರ, ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪಡೆದ ಖ್ಯಾತಿ ನಾಗರತ್ನಮ್ಮನವರದು.

ಸ್ತ್ರೀ ನಾಟಕ ಮಂಡಳಿ

ಒಮ್ಮೆ ಮಹಿಳೆಯರೇ ಎಲ್ಲ ಪಾತ್ರಗಳನ್ನು ಏಕೆ ಅಭಿನಯಿಸಬಾರದೆಂದು ಅವರ ಅಭಿಮಾನಿ ಅಂಬುಜಮ್ಮನವರಿಂದ ಬಂದ ಸಲಹೆಯಿಂದ ಪ್ರೇರಣೆಗೊಂಡು ‘ಕೃಷ್ಣಗಾರುಡಿ’ ನಾಟಕ್ಕಾಗಿ ಅಭ್ಯಾಸ ಪ್ರಾರಂಭಿಸಿಯೇಬಿಟ್ಟರು. ಮಂಡ್ಯದಲ್ಲಿ ಮೂರುನಾಲ್ಕು ಯಶಸ್ವಿ ಪ್ರಯೋಗಗಳಾದ ನಂತರ ೧೯೫೮ರಲ್ಲಿ ‘ಸ್ತ್ರೀ ನಾಟಕ ಮಂಡಲಿ’ ಗೆ ಚಾಲನೆ ಬಂತು. ಇದು ಮಹಿಳೆಯರೇ ಪುರುಷ ಪಾತ್ರಗಳನ್ನು ನಿರ್ವಹಿಸಿ ಸ್ಥಾಪಿಸಿದ ಐತಿಹಾಸಿಕ ದಾಖಲೆ ಎಂದೆನಿಸಿತು. ಇವರೊಡನೆ ಆರ್‌. ಮಂಜುಳಾ, ನಿರ್ಮಲ, ಎಚ್.ಪಿ.ಸರೋಜ, ಸುಜಾತ, ಕಮಲಮ್ಮ, ಎಂ.ಎನ್.ಪುಟ್ಟಮ್ಮ, ಕಾತ್ಯಾಯನಿ ಮುಂತಾದವರು ಪಾತ್ರವರ್ಗದಲ್ಲಿದ್ದರು. ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಕಂಪನಿಯನ್ನು ನಿಭಾಯಿಸಿದ ಖ್ಯಾತಿ ಮತ್ತು ಛಾತಿ ನಾಗರತ್ನಮ್ಮನವರದು. ಹೋದೆಡೆಯಲ್ಲೆಲ್ಲಾ ಪ್ರೇಕ್ಷಕರ ಒತ್ತಾಯದ ಮೇರೆಗೆ 50ರಿಂದ 100 ಪ್ರದರ್ಶನಗಳು ನಡೆಯುತ್ತಿದ್ದವು. ರಾಜ್ಯಾದ್ಯಂತ ಪಡೆದ ಜನ ಮೆಚ್ಚುಗೆಯ ಪ್ರವಾಹ ಹರಿದು ವಿಜಾಪುರ, ಸಾಲಿಗ್ರಾಮ, ಚಿಕ್ಕಮಗಳೂರು, ಹಾಸನಗಳಲ್ಲಿ ಮಳೆ ಬಂದರೂ ನಿಲ್ಲದೆ ನಾಟಕ ಪ್ರದರ್ಶನಗಳು ನಡೆದದ್ದು ಇತಿಹಾಸ. ಕೊಡೆ ಹಿಡಿದು ಪ್ರೇಕ್ಷಕರು ನೋಡುತ್ತಿದ್ದರೆ ನಟಿಯರು ಮಳೆಯಲ್ಲಿ ತೊಯಿದು ಅಭಿನಯಿಸಿದರಂತೆ.

ಚಲನಚಿತ್ರಗಳಲ್ಲಿ: ನಾಗರತ್ನಮ್ಮನವರು ‘ಕಾಮನಬಿಲ್ಲು’, ‘ಪರಸಂಗದ ಗೆಂಡೆತಿಮ್ಮ’, ‘ದಂಗೆ ಎದ್ದ ಮಕ್ಕಳು’ ಮುಂತಾದ ಸುಮಾರು ಹದಿನೈದು ಚಲನಚಿತ್ರಗಳಲ್ಲಿ ಸಹಾ ಅಭಿನಯಿಸಿದ್ದರು. ಕನ್ನಡ ಚಿತ್ರರಂಗವೇ ಅಲ್ಲದೆ ತಮಿಳು ಚಿತ್ರರಂಗದಲ್ಲೂ ಅಪರೂಪಕ್ಕೊಮ್ಮೆ ಅಭಿನಯಿಸಿದ್ದ ನಾಗರತ್ಮಮ್ಮನವರು ಪ್ರಖ್ಯಾತ ಕಲಾವಿದ ಶಿವಕುಮಾರ್ ಅವರು ನಟಿಸಿದ ‘ರೋಸಾಪೂ ರವಿಕ್ಕೈಕಾರಿ’ ಎಂಬ ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಆ ಚಿತ್ರರಂಗದಲ್ಲೂ ಪ್ರಶಂಸೆ ಗಳಿಸಿದ್ದರು.

ಇಂಥವರನ್ನು ನೋಡಿ ಕಲಿಯಬೇಕು: ಇದು ಜೂನ್ ೨೧, ೨೦೦೩ರಂದು ಅಭಿಮಾನಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಾಗರತ್ನಮ್ಮನವರ ಎಪ್ಪತ್ತೇಳನೇ ವಯಸ್ಸಿನ ಹುಟ್ಟುಹಬ್ಬವನ್ನು ಆಚರಿಸಿದಾಗ ನಡೆದ ಒಂದು ಘಟನೆ. ಅಂದು ನಾಗರತ್ನಮ್ಮನವರು ಭೀಮನ ಪಾತ್ರ ನಿರ್ವಹಿಸಿದ್ದರು. ಅಂದು ಮುಖ್ಯ ಅತಿಥಿಗಳು ಮಾಸ್ಟರ್ ಹಿರಣ್ಣಯ್ಯ ಮತ್ತು ವಿಷ್ಣುವರ್ಧನರು. “ಬಡ್ಡಿಮಗ ಭೀಮ ತನ್ನ ೭೭ನೇ ವಯಸ್ಸಿನಲ್ಲೂ ಹೀಗೆ ಮೀಸೆ ತಿರುವಿದ್ದನೋ ಇಲ್ಲವೋ? ಅವನನ್ನು ಇಲ್ಲಿ ಕೂರಿಸಿ ಇವರ ನಟನೆ ತೋರಿಸಬೇಕು” ಎಂದು ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಚಟಾಕಿ ಹಾರಿಸಿದಾಗ ಪ್ರೇಕ್ಷಕರಿಂದ ಮುಗಿಲು ಮುಟ್ಟುವ ಚಪ್ಪಾಳೆ ಹರಿದು ಬಂದಿತ್ತು. “ಮಹಾಭಾರತ, ಕುರುಕ್ಷೇತ್ರ ನಡೆದು ಬಹಳ ಕಾಲವಾಯ್ತು. ಆದರೆ ಇವತ್ತು ನಾಗರತ್ನಮ್ಮನವರು ತಮ್ಮ ನಟನೆಯಿಂದ ಆ ಯುಗಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಇದನ್ನು ಕಂಡದ್ದು ನಮ್ಮ ಸೌಭಾಗ್ಯ. ಕಲಾವಿದ ಪರಕಾಯ ಪ್ರವೇಶ ಮಾಡುವುದು ಕೇಳಿದ್ದೆ. ಈ ದಿನ ನೋಡಿದೆ. ೭೭ನೇ ವಯಸ್ಸಿನಲ್ಲಿ ಅವರು ಪಾತ್ರ ಮಾಡುತ್ತಿಲ್ಲ. ಬದಲಾಗಿ ಪಾತ್ರವೇ ಮಾಡಿಸುತ್ತಿದೆ. ಇಂದಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಕಲಾವಿದರು ಹೆಚ್ಚಾಗಿ ಇಲ್ಲ. ಇಂಥವರನ್ನು ನೋಡಿ ಕಲಿಯಬೇಕು. ೭೭ ವರ್ಷ ಬದುಕಿದರೆ ಸಾಲದು. ೭೦೦ ವರ್ಷ ಬದುಕಬೇಕು” ಎಂದು ಅಂದಿನ ದಿನ ವಿಷ್ಣುವರ್ಧನರು ಹೇಳಿದಾಗ ಈ ಮಹಾನ್ ಕಲಾವಿದೆಯ ಕಣ್ಣಲ್ಲಿ ಮಿಂಚು ಹೊಳೆಯುತ್ತಿತ್ತು. ಅವರು ನಿಧನರಾಗುವುದಕ್ಕೆ ಕೆಲವು ತಿಂಗಳುಗಳ ಹಿಂದೆ ವಯಸ್ಸಿನ ಪ್ರಭಾವದಿಂದ ಗಾಲಿ ಕುರ್ಚಿಯಲ್ಲಿ ಕುಳಿತು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗಲೂ ಈ ಮಹಾತಾಯಿಯ ಮೊಗದಲ್ಲಿನ ಮಿನುಗು ಹಾಗೆಯೇ ಪ್ರಕಾಶಿಸುತ್ತಿತ್ತು.

ವಿದಾಯ: “ಮುಂದಿನ ಜನ್ಮ ಅನ್ನೋದು ಇದ್ದರೆ, ಕಲಾಸೇವೆ ಮಾಡುವ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಆರ್‌.ನಾಗರತ್ನಮ್ಮ ಹೇಳುತ್ತಿದ್ದರು. ಈ ಮಹಾನ್ ಸಾಧಕಿ, ಕಲಾರಂಗದ ಹಿರಿಯ ತಾಯಿ ಅಕ್ಟೋಬರ್ ೭, ೨೦೧೨ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

wikipedia

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *