ಆರ್.ಎಂ. ಹಡಪದ (೧-೩-೧೯೩೬ – ೨೦೦೩): ಸದಾ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯ ಅಭಿವ್ಯಕ್ತಿಯಾದ ಹಡಪದ ರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾದಾಮಿ. ತಂದೆ ಮಲ್ಲಪ್ಪ, ತಾಯಿ ಬಸಮ್ಮ. ಕಲೆಯ ಬೀಡಾದ ಬಾದಾಮಿಯೇ ಬಾಲಕನ ಮೇಲೆ ಬೀರಿದ ಪ್ರಭಾವ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಚಿತ್ರ ಬರೆಯುವ ಗೀಳು. ಸ್ನೇಹಿತರ ಪಾಟಿಯ ಮೇಲೆ ಬಿಡಿಸುತ್ತಿದ್ದ ಚಿತ್ರಗಳು ಇವರ ಕಲೆಗೆ ನೀರೆರೆದ ಉಪಾಧ್ಯಾಯರು ಬಿರಾದಾರ. ಎಸ್.ಎಸ್.ಎಲ್.ಸಿ. ಮುಗಿಸಿ ಹುಬ್ಬಳ್ಳಿಯ ಕಲಾಶಾಲೆಯಿಂದ ಪಡೆದ ಶಿಕ್ಷಣ.
೧೯೬೧ರಲ್ಲಿ ಮಿಣಜಿಗಿಯವರು ಡ್ರಾಯಿಂಗ್ ಟೀಚರ್ಸ್ ಇನ್‌ಸ್ಟಿಟ್ಯೂಟನ್ನು ಬೆಂಗಳೂರಲ್ಲಿ ತೆರೆದಾಗ ಹಡಪದ ರವರು ಬೆಂಗಳೂರಿಗೆ ಬಂದರು. ಕಲಿಯುತ್ತಲೇ ಮಾಡಿದ ಏಕವ್ಯಕ್ತಿ ಪ್ರದರ್ಶನ ೧೯೬೩ರಲ್ಲಿ. ೧೯೬೬ರಲ್ಲಿ ವಿ. ಫೋರ್ (ನಾವು ನಾಲ್ವರು) ಸಂಸ್ಥೆ ಕಟ್ಟಿ (ಟಿ.ಕೆ. ಪಟೇಲ್, ಎಸ್.ಎಸ್. ಮುನೋಳಿ, ಹಡಪದ, ಜಿ.ವೈ. ಹುಬ್ಳೀಕರ್) ಬೆಂಗಳೂರಿನಲ್ಲಿ ಮಾಡಿದ ಕಲಾ ಪ್ರದರ್ಶನ.
ಮಿಣಜಿಗಿಯವರಿಗೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಬಂದಾಗ ಹಡಪದ ರವರು ವಹಿಸಿಕೊಂಡು ಕೆನ್ ಕಲಾಶಾಲೆಯಾಗಿ ಪರಿವರ್ತನೆ. ನೂರಾರು ವಿದ್ಯಾರ್ಥಿಗಳಿಗೆ ಕಲಿಕೆಗೆ ಸ್ಥಳ. ಚಂದ್ರನಾಥ್, ಸಿ. ಚಂದ್ರಶೇಖರ್, ಪ.ಸ. ಕುಮಾರ್, ರಾಮದಾಸ್, ಶ್ಯಾಮಸುಂದರ್, ಶೀಲಾ ಗೌಡ, ಬಿ.ಎ. ಅರಸ್ ಮುಂತಾದವರೆಲ್ಲ ಹಡಪದ ರವರ ಕೆನ್ ಕಲಾ ಶಾಲಾ ವಿದ್ಯಾರ್ಥಿಗಳೇ. ಕೆನ್ ಕಲಾ ಶಾಲೆಯಲ್ಲಿ ಹಲವಾರು ವರ್ಷ ನಿರ್ವಹಿಸಿದ ಪ್ರಾಂಶುಪಾಲರ ಹುದ್ದೆ.
೧೯೮೭-೯೦ ರವರೆಗೆ ಲಲಿತ ಕಲಾ ಅಕಾಡಮಿ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯ. ಕಲಾ ಸಂಗ್ರಹಣ ಶಿಬಿರ, ಕಲಾ ಪುಸ್ತಕ ಪ್ರಕಟಣೆ, ಗ್ರಾಫಿಕ್ ಸ್ಟುಡಿಯೋ ಸ್ಥಾಪನೆ, ಅಂತರ ರಾಜ್ಯ ವಿನಿಮಯ ಕಲಾ ಕೇಂದ್ರ ಪ್ರದರ್ಶನ ಮುಂತಾದುವು.
ಲಲಿತಕಲಾ ಅಕಾಡಮಿ, ನವದೆಹಲಿ, ಭಾರತ್ ಭವನ್-ಭೂಪಾಲ್ ಅಲ್ಲದೆ ಆಸ್ಟಿನ್, ಅಮೆರಿಕಾ, ಜರ್ಮನಿ ಮುಂತಾದೆಡೆ ವ್ಯಾಪಕ ಪ್ರವಾಸಮಾಡಿ ಮಾಡಿದ ಕಲಾ ಪ್ರದರ್ಶನ. ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡಮಿ ಸೀನಿಯರ್ ಫೆಲೊಷಿಪ್ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.