ಆರೋಗ್ಯಕ್ಕೆ ಮಜ್ಜಿಗೆ: ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಗಂಟೆಗೊಮ್ಮೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಸಿತವಾಗುತ್ತದೆ.
ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಯಾವುದೋ ಸಮಾರಂಭಕ್ಕೆ ಹೋಗಿ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.
ಮಜ್ಜಿಗೆ ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುತ್ತದೆ. ಅದಕ್ಕೆ ಬೇಸಿಗೆ ಕಾಲದಲ್ಲಿ ಎಲ್ಲರೂ ಮಜ್ಜಿಗೆ ನೀರಿಗೆ ಮೊರೆ ಹೋಗುತ್ತಾರೆ.
ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲೊರಿ, ಕೊಬ್ಬಿನ ಅಂಶ ತೀರಾ ಕಡಿಮೆ.
ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
ಮಜ್ಜಿಗೆ ನೀರಿನಲ್ಲಿ ಹೇರಳವಾಗಿ ಪೊಟಾಷಿಯಂ, ಕ್ಯಾಲ್ಸಿಯಂ, ಫಾಸ್ಫರಸ್ ಹಾಗೂ ವಿಟಮಿನ್ ಬಿ12 ಇರುತ್ತದೆ.
ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.