ಆನಂದಕಂದ (೧೬-೪-೧೯೦೦ – ೩೦-೧೦-೧೯೮೨): ಸಂಪಾದನೆ, ಸಂಶೋಧನೆಯಲ್ಲಿ ಶ್ರೇಷ್ಠರೆನಿಸಿದ ಆನಂದಕಂದರ ನಿಜನಾಮ ಬೆಟಗೇರಿ ಕೃಷ್ಣಶರ್ಮ. ಇವರು ಹುಟ್ಟಿದ್ದು ಗೋಕಾಕ ತಾಲ್ಲೂಕಿನ ಬೆಟಗೇರಿ. ತಂದೆ ಶ್ರೀನಿವಾಸರಾವ್, ತಾಯಿ ರಾಧಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಟಗೇರಿಯಲ್ಲೇ. ಮುಲ್ಕಿ ಪರೀಕ ಪಾಸು ಮಾಡಿದ ನಂತರ ಪುಣೇಕರ ನರಸಿಂಹಾಚಾರ‍್ಯರಲ್ಲಿ ಶಿಷ್ಯತ್ವ. ೧೯೨೬ರಲ್ಲಿ ಬೆಂಗಳೂರಿನ ಆರ್ಯ ವಿದ್ಯಾಶಾಲೆಯ ಶಿಕ್ಷಕ ವೃತ್ತಿಯ ಹೊಣೆ. ಪುನಃ ಧಾರವಾಡಕ್ಕೆ ಹೋಗಿ ಗೆಳೆಯರ ಗುಂಪಿನ ಸಂಘಟನೆ. ಮನೋಹರ ಗ್ರಂಥಮಾಲೆಯ ಪ್ರಾರಂಭಕ್ಕೆ ಕಾರಣೀಭೂತರು.
೧೯೩೮ರಲ್ಲಿ ‘ಜಯಂತಿ’ ಪತ್ರಿಕೆ ಪ್ರಾರಂಭ. ಹಲವಾರು ಲೇಖಕರನ್ನು ಹುರಿದುಂಬಿಸಿ ಪತ್ರಿಕೆಗೆ ಬರೆಸಿದರು. ನೂರಾರು ಲೇಖಕರನ್ನು ಪತ್ರಿಕೆಯ ಮೂಲಕ ಪರಿಚಯಿಸಿದರು. ಸುಮಾರು ೨೦ ವರ್ಷ ಕಾಲ ಜಯಂತಿ ಪತ್ರಿಕೆಯ ಸಂಪಾದಕತ್ವದ ಹೊಣೆ. ಕೆಲ ಕಾಲ ಕರ್ನಾಟಕ ವಿಶ್ವವಿದ್ಯಾಲಯದ (ಧಾರವಾಡ) ಕನ್ನಡ ಅಧ್ಯಯನ ಪೀಠದಲ್ಲಿ ಪ್ರಧಾನ ಸಂಶೋಧಕರ ಕಾರ‍್ಯ.
೧೯೩೩ರಲ್ಲಿ ಮೊಟ್ಟಮೊದಲ ಕಾದಂಬರಿ ‘ಸುದರ್ಶನ’ ಪ್ರಕಟ. ಮನೋಹರ ಗ್ರಂಥಮಾಲೆಯ ಪ್ರಥಮ ಕೃತಿ ಎಂಬ ಹೆಗ್ಗಳಿಕೆ. ಅಶಾಂತಿಪರ್ವ, ಮಗಳ ಮದುವೆ, ಮಲ್ಲಿಕಾರ್ಜುನ, ರಾಜಯೋಗಿ, ರಾಜಶೇಖರ ಮುಂತಾದ ಕಾದಂಬರಿಗಳು. ಪಂಚಗಂಗಾ, ಬೆಂದ ಹೃದಯ, ಬೆಳವಡಿ ಮಲ್ಲಮ್ಮ, ಮುಂಡರಗಿ ಗಂಡುಗಲಿ ಮೊದಲಾದ ನಾಟಕಗಳು. ಕರ್ನಾಟಕ ಜನಜೀವನ, ನಮ್ಮ ಸಂಸ್ಕೃತಿ ಪರಂಪರೆ, ಸಾಹಿತ್ಯವು ಸಾಗಿರುವ ದಾರಿ, ಸಾಹಿತ್ಯ ವಿಹಾರ ಮುಂತಾದ ವಿಮರ್ಶೆ, ಸಂಶೋಧನ ಕೃತಿಗಳು. ಕನ್ನಡ ಜನಪದ ಸಾಹಿತ್ಯ, ಬೀಸು ಕಲ್ಲಿನ ಹಾಡುಗಳು ಮೊದಲಾದ ಜನಪದ ಕೃತಿಗಳು. ಅಕ್ರೂರ ಚರಿತ್ರೆ, ಕನಕದಾಸರ ಭಕ್ತಿ ಗೀತೆಗಳು, ಹರಿಭಕ್ತಿ ಸಾಧನೆ, ಪೂಜಾತತ್ತ್ವ, ಆರ್ತಭಾವ, ಲೋಕನೀತಿ ಮುಂತಾದ ಸಂಪಾದಿತ ಕೃತಿಗಳು. ಚಂದ್ರಹಾಸ, ಬಸವಣ್ಣ, ಲವಕುಶ, ಭೀಷ್ಮ ಮೊದಲಾದ ಮಕ್ಕಳ ಸಾಹಿತ್ಯ ರಚನೆ.
ಸಂದ ಪ್ರಶಸ್ತಿ ಗೌರವಗಳು: ಜಮಖಂಡಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಕನ್ನಡದ ಸಣ್ಣಕಥೆಗಳ ಸಮ್ಮೇಳನದ ಅಧ್ಯಕ್ಷತೆ, ಮುಂಬೈ ಸರಕಾರದಿಂದ ‘ಮಗಳ ಮದುವೆ’ ಕಾದಂಬರಿಗೆ ಬಹುಮಾನ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ನಾಗಮಂಗಲದಲ್ಲಿ ೧೯೭೧ರಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ. ಅಖಿಲ ಕರ್ನಾಟಕ ವೈದ್ಯಕೀಯ ಸಮ್ಮೇಳನದ ಅಧ್ಯಕ್ಷತೆ, ಧರ‍್ಮಸ್ಥಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-ಸನ್ಮಾನ. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.
ಮಾಹಿತಿಗಾಗಿ ಧನ್ಯವಾದಗಳು.