bheemasena

ಆದರ್ಶ ರಾಜಕಾರಣಿ – ಭೀಮಸೇನ

ಮಹಾಭಾರತದ ಯುದ್ಧಾನಂತರ ಧರ್ಮರಾಜನು ಪಟ್ಟಾಭಿಷಿಕ್ತನಾಗಿ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಭೀಮಾರ್ಜುನರ ಸಹಾಯದಿಂದ ರಾಜ್ಯಭಾರವನ್ನು ನಡೆಸುತ್ತಿದ್ದನು.

ಕ್ಷತ್ರಿಯ ಸಂಪ್ರದಾಯದಂತೆ ಧೃತರಾಷ್ಟ್ರನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಅರಣ್ಯಕ್ಕೆ ಹೋಗಬೇಕಾಗಿತ್ತು. ಅದರಲ್ಲೂ ತನ್ನ ಪುತ್ರವ್ಯಾಮೋಹದ ತಪ್ಪಿನಿಂದ ಕುರುಕ್ಷೇತ್ರದಲ್ಲಿ ಘೋರವಾದ ಯುದ್ಧವು ನಡೆದು, ಎಲ್ಲ ಮಕ್ಕಳನ್ನೂ ಕಳೆದುಕೊಂಡ ದುರಂತವು ನಡೆದ ಬಳಿಕವೂ ಧೃತರಾಷ್ಟ್ರನಲ್ಲಿ ವೈರಾಗ್ಯವಾಗಲೀ, ಪಶ್ಚಾತ್ತಾಪಗಳಿಂದ ರಾಜ್ಯದ ವೈಭವವನ್ನು ತ್ಯಜಿಸುವ ಮನೋಭಾವನೆಯಾಗಲಿ ಉಂಟಾಗಲಿಲ್ಲ. ಧರ್ಮರಾಜನ ರಾಜೋಪಚಾರವನ್ನು ಪಡೆಯುತ್ತಾ ರಾಜ್ಯದ ಸುಖಭೋಗಗಳಲ್ಲಿಯೇ ಮಗ್ನನಾಗಿದ್ದ. ಭೀಮಸೇನನ ಮತ್ತು ವಿದುರನ ಉಪದೇಶದ ಪರಿಣಾಮವಾಗಿ ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅರಣ್ಯಕ್ಕೆ ಹೋಗಲು ಸಿದ್ಧನಾದನು.

ಯುದ್ಧದಲ್ಲಿ ಮಡಿದ ತನ್ನ ಮಕ್ಕಳಾದ ದುರ್ಯೋಧನಾದಿಗಳಿಗೆ ವೈಭವದಿಂದ ಶ್ರಾದ್ಧವನ್ನು ನಡೆಸಬೇಕೆಂಬುದು ಅವನ ಕೊನೆಯ ಆಸೆಯಾಗಿತ್ತು. ಅದಕ್ಕಾಗಿ ಬೇಕಾದ ಹಣವನ್ನು ಕೊಡುವಂತೆ ಧರ್ಮರಾಜನಿಗೆ ಹೇಳಿ ಕಳುಹಿಸಿದನು. ಧಮರಾಜನು ಕೋಶಾಧ್ಯಕ್ಷನಾದ ಭೀಮನನ್ನು ಕರೆದು ರಾಜ್ಯದ ಕೋಶದಿಂದ ಧೃತರಾಷ್ಟ್ರನಿಗೆ ಶ್ರಾದ್ಧವಿಧಿಗೆ ಬೇಕಾಗಿರುವಷ್ಟು ಹಣವನ್ನು ಕೊಡುವಂತೆ ತಿಳಿಸಿದನು. ಭೀಮಸೇನನು ಇದಕ್ಕೆ ಒಪ್ಪಲಿಲ್ಲ. ಧರ್ಮರಾಜನು ‘ಇದು ಧೃತರಾಷ್ಟ್ರರ ಕೊನೆಯಾಸೆ, ಇನ್ನು ಮುಂದೆ ಅವರುಹಣವನ್ನು ಕೇಳುವುದಿಲ್ಲ. ಅವರ ಅಂತಿಮ ಇಚ್ಛೆಯನ್ನು ನೆರವೇರಿಸು’ ಎಂದು ಪರಿಪರಿಯಾಗಿ ಒತ್ತಾಯಿಸಿದನು. ಆದರೂ ಭೀಮಸೇನನು ಸಮ್ಮತಿಸಲಿಲ್ಲ. ಧರ್ಮರಾಜನು ಚಕ್ರವರ್ತಿಯೂ, ಅಣ್ಣನೂ ಆಗಿದ್ದರೂ ಭೀಮನು ಮಾತ್ರ ರಾಜನ ಆಜ್ಞೆಗೆ ವಿರುದ್ಧವಾದರೂ ದುಂದುವೆಚ್ಚ ಮಾಡಲು ಒಪ್ಪಲೇ ಇಲ್ಲ. ‘ಧರ್ಮದ ನೀತಿ ನಿಯಮಗಳನ್ನೆಲ್ಲ ಮೀರಿ, ಸ್ವಚ್ಛಂದವಾಗಿ ವರ್ತಿಸಿ ಲೋಕದ ಅಶಾಂತಿಗೆ ಕಾರಣರಾದ ದುಷ್ಟರ ಶ್ರಾದ್ಧ ಸಮಾರಂಭಕ್ಕೆ ರಾಜ್ಯದ ಬೊಕ್ಕಸದಿಂದ ಹಣವನ್ನು ನೀಡುವುದು ಉಚಿತವಲ್ಲ, ಇದು ಪ್ರಜೆಗಳ ಹಣ. ಪ್ರಜೆಗಳ ಅಭಿವೃದ್ಧಿಗಾಗಿಯೇ ಉಪಯೋಗಿಸಬೇಕು. ಅವರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿರುವ ಹಣವಿದು. ಪ್ರಜೆಗಳ ಹಿತಕ್ಕಲ್ಲದೆ ರಾಜಕೀಯದಿಂದ ನಿವೃತ್ತರಾದವರಿಗೆ ಅಥವಾ ದುಂದುವೆಚ್ಚಕ್ಕೆ ಎಂದೂ ವ್ಯಯಿಸಬಾರದು. ಪ್ರಜೆಗಳ ಕಲ್ಯಾಣ ಕಾರ್ಯಗಳಿಗಾಗಿ ಉಪಯೋಗಿಸಬೇಕಾದ ಹಣವನ್ನು, ಜಗತ್ತನ್ನು ವಿನಾಶದ ದಾರಿಗೆ ತಳ್ಳಿದ ವ್ಯಕ್ತಿಗಳ ಶ್ರಾದ್ಧಕ್ಕೆ ಆದರೂ ಉಪಯೋಗಿಸಬಾರದು’ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದನು. ಕೊನೆಗೆ ಪಾಂಡವರು ತಮ್ಮ ಸ್ವಂತ ಹಣವನ್ನು ಧೃತರಾಷ್ಟ್ರನಿಗೆ ಕೊಟ್ಟಾಗ ಭೀಮನು ಆಕ್ಷೇಪಿಸಲಿಲ್ಲ.

ಮಕ್ಕಳೇ, ಸರಕಾರದ ಹಣ, ಸ್ವಂತ ಹಣದ ವ್ಯಯದಲ್ಲಿನ ಅಂತರವರಿತ ಭೀಮಸೇನನು ಪೂಜ್ಯನು. ತಮ್ಮ ಸ್ವಂತ ಆಸೆ ಆಕಾಂಕ್ಷೆಗಳ ದುಂದುವೆಚ್ಚಕ್ಕಾಗಿ ಸಾರ್ವಜನಿಕ ಹಣವನ್ನು ಉಪಯೋಗಿಸಬಾರದೆಂಬುದನ್ನು ಎತ್ತಿ ತೋರಿಸುವ ಈ ಘಟನೆ ದೇಶದ ಈಗಿನ ಆಡಳಿತಗಾರರಿಗೆ, ಮಂತ್ರಿಗಳಿಗೆ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಉತ್ತಮ ಪಾಠವಾಗಿದೆ. ನೀವೂ ಇಂತಹ ಆದರ್ಶವನ್ನು ಅಳವಡಿಸಿಕೊಳ್ಳಿರಿ. ಮಿತವ್ಯಯದ ಪಾಠ ಕಲಿತು ಉತ್ತಮ ಪ್ರಜೆಗಳಾಗಿ, ರಾಜನೀತಿ ಜ್ಞರಾಗಿ ಬಾಳಿರಿ.

https://www.hindujagruti.org/hinduism-for-kids-kannada/618.html

ಇವುಗಳೂ ನಿಮಗಿಷ್ಟವಾಗಬಹುದು

king

ಆತ್ಮ ಚೌರ್ಯ

ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ …

Leave a Reply

Your email address will not be published. Required fields are marked *