ಈ ಹೆಸರು ಮುಂಬೈ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈ ಕನ್ನಡ ರಂಗಭೂಮಿಯ ಕೆಲವೇ ಜನ ಅಪ್ರತಿಮ ಕಲಾವಿದರಲ್ಲಿ ಅಹಲ್ಯ ಬಲ್ಲಾಳ ಸಹ ಒಬ್ಬರು. ಅಹಲ್ಯ ಅವರು ಅಭಿನೇತ್ರಿ ಮಾತ್ರವಲ್ಲದೆ ಭರತನಾಟ್ಯ ಪ್ರವೀಣೆ ಮತ್ತು ಬರಹಗಾರ್ತಿಯೂ ಆಗಿದ್ದಾರೆ. ಬಹುಮುಖಪ್ರತಿಭೆಯ ವ್ಯಕ್ತಿತ್ವ.
ಅಹಲ್ಯ ಅವರು ಪಿ.ಎನ್.ವೆಂಕಟ್‍ರಾವ್ ಮತ್ತು ಶ್ರೀಮತಿ.ಜಾನಕಿ ದಂಪತಿಗಳ ಮಗಳಾಗಿ ದಿನಾಂಕ. ಡಿಸೆಂಬರ್ ೦೧, ೧೯೬೩ರಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿಯಾಗಿ ವಿಶ್ರಾಂತರಾಗಿದ್ದರು. ತಾಯಿ ಜಾನಕಿ ಗೃಹಿಣಿ. ಖ್ಯಾತ ಚಲನಚಿತ್ರ ನಿರ್ದೇಶಕರಾದ ರಾಮಚಂದ್ರ.ಪಿ.ಎನ್. ಅವರು ಅಹಲ್ಯ ಅವರ ತಮ್ಮ. ಉಡುಪಿ, ಕುಂದಾಪುರ, ಧಾರವಾಡ, ಬೆಂಗಳೂರು ಮತ್ತು ಮುಂಬೈ ಯಲ್ಲಿ ವಿದ್ಯಾಭ್ಯಾಸ ಮಾಡಿದ ಅಹಲ್ಯ,ವಿಜ್ಞಾನ ಪದವಿಯಲ್ಲಿ, ಮಂಗಳೂರು ವಿಶ್ವವಿದ್ಯಾಲಯಕ್ಕೇ ‘೧೦ನೇಯ ರ್ಯಾಂಕ್’ ಪಡೆದಂಥವರು.
ವಿವಾಹ: ಅಹಲ್ಯಾ ಮುಂದೆ ಶ್ರೀ ಸಂತೋಷ ಬಲ್ಲಾಳರನ್ನು ವಿವಾಹವಾದರು. ಅಹಲ್ಯ-ಸಂತೋಷ ಬಲ್ಲಾಳ ದಂಪತಿಗಳಿಗೆ ಶಂತನು ಮತ್ತು ಅನಿರುದ್ಧ ಎಂಬ ಇಬ್ಬರು ಗಂಡುಮಕ್ಕಳು. ವಿವಾಹವಾದ ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ, ಕನ್ನಡ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದರು. ಭರತನಾಟ್ಯ ಶಾಸ್ತ್ರವನ್ನು ಮೊದಲು ಗುರುಗಳಾದ ಶ್ರೀಮತಿ. ಮಿನಲ್ ನಾಯಕ್, ನಂತರ ಶ್ರೀಮತಿ ವಸಂತಲಕ್ಷ್ಮಿ ವೆಂಕಟ್ರಾಮ್ ಮತ್ತು ಶ್ರೀಮತಿ ಇಂದು ರಾಮನ್ ಮರ್ಗದರ್ಶನದಲ್ಲಿ ಅಭ್ಯಾಸಮಾಡಿ, ಕರ್ನಾಟಕ ಸರಕಾರದ ಪರೀಕ್ಷೆಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾದರು.
ಭರತನಾಟ್ಯ ರಂಗಪ್ರವೇಶ
‘ಭರತನಾಟ್ಯ ವಿದ್ವತ್ತು ಪದವಿ’ಯನ್ನು ಪಡೆದುಕೊಂಡರು. ನೃತ್ಯಕ್ಕಾಗಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಶಿಷ್ಯವೇತನ ಪ್ರಾಪ್ತಿಯಾಗಿತ್ತು.
- ೧೯೮೮ರಲ್ಲಿ ದಿ. ಜಿ.ವಿ ಅಯ್ಯರ್, ದಿ.ಜೀವರಾಜ್ ಆಳ್ವ ಅವರಂಥ ಕಲಾಪ್ರೇಮಿಗಳ ಸಮ್ಮುಖದಲ್ಲಿ, ಬೆಂಗಳೂರಿನ ’ಯವನಿಕಾ’ ಸಭಾಂಗಣದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.
- ಕರ್ನಾಟಕ, ಮುಂಬೈ ಮತ್ತು ಅದರ ಸುತ್ತಮುತ್ತ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರಲ್ಲದೆ ಅನೇಕ ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ.
ಅಭಿನಯ
೧೯೮೮ರಿಂದ ಇಲ್ಲಿಯವರೆಗೆ ಮುಂಬೈನ ಕನ್ನಡ ಕಲಾಕೇಂದ್ರ, ಮೈಸೂರ್ ಅಸೋಸಿಯೇಷನ್, ಮುಂಬೈ, ’ದೃಶ್ಯ’ ತಂಡ ಮತ್ತು ಮಾಟುಂಗ ಕರ್ನಾಟಕ ಸಂಘದ ಕಲಾಭಾರತಿ ತಂಡ,ಗಳ ಕನ್ನಡ ನಾಟಕಗಳಲ್ಲಿ ಅಭಿನಯಿಸಿ, ಅಹಲ್ಯ ಬಲ್ಲಾಳಾರು ಅಭಿನಯಿಸಿದ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಮನದಲ್ಲಿ ಒಂದು ವಿನೂತನ ಅನುಭವವನ್ನು ಹುಟ್ಟಿಹಾಕಿತ್ತು.
ವಿಶಿಷ್ಠವಾದ ನಾಟಕ ವಾಚನದ ಅನುಭವ : ೨೦೦೫ರಲ್ಲಿ ಪ್ರಸಿದ್ಧ ರಂಗತಜ್ಞ ಸದಾನಂದ ಸುವರ್ಣ ವರೊಂದಿಗೆ, ಅವರದೇ ನಿರ್ದೇಶನದಲ್ಲಿ ಜಯಂತ ಕಾಯ್ಕಿಣಿಯವರು ಅನುವಾದಿಸಿದ ಇತಿ ನಿನ್ನ ಅಮೃತಾ ನಾಟಕ ವಾಚನದ ಅನುಭವ ಅಹಲ್ಯ ಅವರ ಪಾಲಿಗೆ ವಿಶಿಷ್ಟವಾದುದು.
ಅಹಲ್ಯ ಬಲ್ಲಾಳರು ಅಭಿನಯಿಸಿದ ನಾಟಕಗಳು
- ಪದ್ಮಶ್ರೀ ದುಂಢೀರಾಜ್ (ನಿರ್ದೇಶನ: ಕಿಶೋರಿ ಬಲ್ಲಾಳ)
- ಸಹ್ಯಾದ್ರಿಯ ಸ್ವಾಭಿಮಾನ (ರಚನೆ: ಆರ್.ಡಿ.ಕಾಮತ, ನಿ: ಶ್ರೀಪತಿ ಬಲ್ಲಾಳ)
- ತರುಣ ದುರ್ದಂಡ ಮುದುಕ ಮಾರ್ತಾಂಡ (ಮರಾಠಿ ಮೂಲದ ಕನ್ನಡ ರೂಪಾಂತರ ಮತ್ತು ನಿರ್ದೇಶನ: ಶ್ರೀಪತಿ ಬಲ್ಲಾಳ)
- ನಮ್ಮ ನಮ್ಮಲ್ಲಿ ( ಮರಾಠಿಯ ’ಚಾರ್ ಚೌಗಿಯ’ ನಾಟಕದ ರೂಪಾಂತರ ಮತ್ತು ನಿರ್ದೇಶನ: ಸಂತೋಷ ಬಲ್ಲಾಳ)
- ಬಾಕಿ ಇತಿಹಾಸ (ಮೂಲ ಕೃತಿ:ಬಾದಲ್ ಸರ್ಕಾರ್, ನಿ: ರಮೇಶ್ ಶಿವಪುರ)
- ಬೆಂದಕಾಳೂರು (ರಚನೆ ಮತ್ತು ನಿರ್ದೇಶನ: ಡಾ.ಬಿ.ಆರ್.ಮಂಜುನಾಥ್)
- ಪುಷ್ಪರಾಣಿ (ರಚನೆ: ಚಂದ್ರಶೇಖರ ಕಂಬಾರ, ನಿ: ಜಯಲಕ್ಷ್ಮೀ ಪಾಟೀಲ್)
- ಮಂಥರಾ (ರಚನೆ: ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ನಿ: ಜಯಲಕ್ಷ್ಮೀ ಪಾಟೀಲ್)
- ಎಲ್ಲಮ್ಮ (ಮೂಲ ನಾಟಕ: ಲೋರ್ಕಾ, ರೂಪಾಂತರ ಮತ್ತು ನಿರ್ದೇಶನ: ಬಿ. ಬಾಲಚಂದ್ರ ರಾವ್)
- ಅಂಬೆ (ಕನ್ನಡಕ್ಕೆ: ಸರಜೂ ಕಾಟ್ಕರ್, ನಿರ್ದೇಶನ:ಭರತ್ ಕುಮಾರ್ ಪೊಲಿಪು)
- ಅಂಬೆ [ತುಳು] (ನಿ: ಭರತ್ ಕುಮಾರ್ ಪೊಲಿಪು)
- ಕುವೆಂಪು ಕಂಡ ಮಂಥರೆ (ಮೂಲ : ಕುವೆಂಪು, ರಂಗರೂಪ ಮತ್ತು ನಿರ್ದೇಶನ ಸಾ ದಯಾ[ದಯಾನಂದ ಸಾಲ್ಯಾನ])
ಮಕ್ಕಳ ನಾಟಕಗಳ ಪ್ರದರ್ಶನ
ಅಹಲ್ಯ ಬಲ್ಲಾಳ ಅವರು ಮುಂಬೈನ ಕನ್ನಡ ಕಲಾಕೇಂದ್ರ, ಮೈಸೂರ್ ಅಸೋಸಿಯೇಷನ್, ಮುಂಬೈ, ಮಾಟುಂಗಾ ಕರ್ನಾಟಕ ಸಂಘ, ಬಂಟರ ಸಂಘ, ಎನ್.ಕೆ.ಇ.ಎಸ್ ಸಂಸ್ಥೆಯಂಥ ಹಲವಾರು ಸಂಘ ಸಂಸ್ಥೆಗಳಿಗಾಗಿ ಅನೇಕ ಕನ್ನಡ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಅಹಲ್ಯ ಬಲ್ಲಾಳ ನಿರ್ದೇಶಿಸಿದ ನಾಟಕಗಳು
- ನಕ್ಕಳಾ ರಾಜಕುಮಾರಿ (ರಚನೆ: ಪಾಷಾ)
- ಗುಮ್ಮ (ರಚನೆ: ಎ.ಎಸ್. ಮೂರ್ತಿ)
- ಸೂರ್ಯ ಬಂದ (ರಚನೆ: ವೈದೇಹಿ)
- ಯಾರು ಶ್ರೇಷ್ಠರು (ಇಂಗ್ಲೀಷ್ ಮೂಲದ ನಾಟಕ, ಕನ್ನಡ ರೂಪಾಂತರ: ಅಹಲ್ಯ ಬಲ್ಲಾಳ್)
- ಹಕ್ಕಿ ಹಾಡು (ರಚನೆ: ವೈದೇಹಿ)
ಇನ್ನೂ ಅನೇಕ ಮಕ್ಕಳ ನಾಟಕಗಳು.
ಸಂದ ಪ್ರಶಸ್ತಿ ಪುರಸ್ಕಾರಗಳು
ವೃತ್ತಿಯಲ್ಲಿ ಕಂಠದಾನ ಕಲಾವಿದೆ, ಮತ್ತು ಜಾಹೀರಾತುಗಳ ಪಠ್ಯ ಅನುವಾದಕಿಯಾಗಿರುವ ಅಹಲ್ಯಾ ಅವರು ಶ್ರೇಷ್ಠ ಅಭಿನಯಕ್ಕಾಗಿ ಮಾಟುಂಗಾ ಕರ್ನಾಟಕ ಸಂಘ ಮುಂಬೈ ಆಯೋಜಿಸುವ ೨೦೦೪ರ ಸಾಲಿನ ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ”ಯಲ್ಲಿ ‘ಅತ್ಯುತ್ತಮ ನಟಿ ಪ್ರಥಮ’(ನಾಟಕ: ಪುಷ್ಪರಾಣಿ, ಮಹಾರಾಣಿ ಪಾತ್ರ) ಪ್ರಶಸ್ತಿ, ‘ಭಾರತಿ ಕೊಡ್ಲೀಕೆರೆ ಸ್ಮಾರಕ’ (ನಾಟಕ: ಮಂಥರಾ, ಮಂಥರೆ ಪಾತ್ರ) ಪ್ರಶಸ್ತಿ, ‘ಅತ್ಯುತ್ತಮ ನಟಿ ಪ್ರಥಮ’, (ನಾಟಕ: ಎಲ್ಲಮ್ಮ, )ಪ್ರಶಸ್ತಿ, ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’ಅತ್ಯುತ್ತಮ ನಟಿ ಪ್ರಥಮ’ (ನಾಟಕ: ಅಂಬೆ, ಅಂಬೆ ಪಾತ್ರಕ್ಕಾಗಿ)ಪ್ರಶಸ್ತಿಯನ್ನು ಪಡೆದಿದ್ದಾರೆ.
`ಕುವೆಂಪು ಕಂಡ ಮಂಥರೆ ‘ ನಾಟಕದಲ್ಲಿನ ಮಂಥರೆ ಪಾತ್ರಕ್ಕ್ಕಾಗಿ, ಮಾಟುಂಗಾ ಕರ್ನಾಟಕ ಸಂಘ ಮುಂಬೈ ಆಯೋಜಿಸುವ ೨೦೧೨ರ ಸಾಲಿನ ಅಖಿಲ ಭಾರತ ಕುವೆಂಪು ನಾಟಕ ಸ್ಪರ್ಧೆ”ಯಲ್ಲಿ ಅತ್ಯುತ್ತಮ ನಟಿ ಪ್ರಥಮ’ ಹಾಗೂ ಮತ್ತೊಮ್ಮೆ `ಭಾರತಿ ಕೊಡ್ಲೇಕರ್ ಪ್ರಶಸ್ತಿ’ ತಮ್ಮದಾಗಿಸಿಕೊಂಡಿದ್ದಾರೆ. ಹಲವು ಸಲ ಅಖಿಲ ಭಾರತ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ತೀರ್ಪುಗಾರರಾಗುವ ಗೌರವ ಅಹಲ್ಯ ಬಲ್ಲಾಳರಿಗೆ ಸಂದಿದೆ.