ಅಶೋಕ ಸ್ತಂಭ ಚಿತ್ರದ ಅಂಚೆ ಚೀಟಿಯ ಕಥೆ

೧೯೪೭ರ ಆಗಸ್ಟ ೧೫ರಂದು ಭಾರತ ಸ್ವತಂತ್ರವಾದಾಗ ಆ ಸಂತಸವನ್ನು ಅಂಚೆಚೀಟಿಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆಗ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡುವ ಸಂವಿಧಾನಿಕ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿ ಬಂದಿರಲಿಲ್ಲ. ಹೀಗಾಗಿ ಸ್ವತಂತ್ರ ಭಾರತದ ಮೊದಲ ಅಂಚೆಚೀಟಿ ಬಿಡುಗಡೆಯಾಗಲು ಸುಮಾರು ೯೯ ದಿನಗಳ ಕಾಲ ಕಾಯಬೇಕಾಯಿತು! ಹೀಗೆ ಮೊದಲ ಅಂಚೆಚೀಟಿಯು ತ್ರಿವರ್ಣ ಧ್ವಜವನ್ನು ಹೊತ್ತು ೧೯೪೭ರ ನವಂಬರ ೨೧ರಂದು ಬಿಡುಗಡೆಯಾಯಿತು. ಅದಾಗಿ ೨೪ ದಿನಗಳ ಬಳಿಕ ಡಿಸೆಂಬರ ೧೫ರಂದು ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಮೇಲಿರುವ ಚತುರ್ಮುಖ ಸಿಂಹಗಳ ಚಿತ್ರವನ್ನು ಹೊತ್ತು ಎರಡನೆಯ ಅಂಚೆಚೀಟಿ ಹೊರಬಂದಿತು.

ಈ ಅಂಚೆಚೀಟಿಗಳಲ್ಲಿ ಬಳಸಿದ ಚಿತ್ರವು ಭಾರತದ ಭಾರತದ ರಾಷ್ಟ್ರೀಯ ಚಿಹ್ನೆಯದ್ದಾಗಿದೆ. ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ ಅಶೋಕನು ವಾರಣಾಸಿಯ ಬಳಿಯ ಸಾರಾನಾಥದಲ್ಲಿ ಸ್ಥಾಪಿಸಿದ ಕಂಬದ ತುದಿಯಲ್ಲಿನ ನಾಲ್ಕು ಮುಖದ ಸಿಂಹದ ಚಿತ್ರವನ್ನು ನಮ್ಮ ರಾಷ್ಟ್ರಚಿಹ್ನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೌರ್ಯ ಸಾಮ್ರಾಟ ಚಂದ್ರಗುಪ್ತನ ಮೊಮ್ಮಗನೂ, ಬಿಂದುಸಾರನ ಮಗನೂ ಆಗಿದ್ದ ಅಶೋಕನು ಕಳಿಂಗ ರಾಜ್ಯದ ಮೇಲೆ ದಂಡೆತ್ತಿಹೋದಾಗ ನಡೆದ ಲಕ್ಷಾಂತರ ಸೈನಿಕರ ಮಾರಣಹೋಮ, ಹರಿದ ನೆತ್ತರಿನ ಕೋಡಿಯನ್ನು ಕಂಡು ಜಿಗುಪ್ಸೆಗೊಂಡು ಬೌದ್ಧಮತವನ್ನು ಸ್ವೀಕರಿಸುತ್ತಾನೆ. ತಾನು ನಂಬಿದ ತತ್ವಗಳನ್ನು ಪ್ರಸಾರಮಾಡಲು ಅನೇಕ ಶಿಲಾಶಾಸನಗಳನ್ನೂ, ಸ್ಥೂಪಗಳನ್ನೂ, ಕಂಬಗಳನ್ನೂ ಸ್ಥಾಪಿಸುತ್ತಾನೆ.

Ashok Stam
ಸ್ವತಂತ್ರ ಭಾರತದ ಮೊದಲ ಎರಡನೆಯ ಅಂಚೆಚೀಟಿ. ಅಶೋಕ ಸಿಂಹ ಸ್ತಂಭ – ಭಾರತದ ರಾಷ್ಟ್ರೀಯ ಚಿಹ್ನೆ

 

ಹೀಗೆ ಸುಮಾರು ಕ್ರಿ ಪೂ ೨೫೦ರಲ್ಲಿ ಸಾರಾನಾಥದಲ್ಲಿ ಸ್ಥಾಪಿಸಿದ ಕಂಬದ ತುದಿಯಲ್ಲಿದ್ದ ಸಿಂಹದ ಚಿತ್ರವೇ ನಮ್ಮ ರಾಷ್ಟ್ರಲಾಂಛನವಾಗಿ, ಈ ಅಂಚೆಚೀಟಿಯಲ್ಲಿ ಪ್ರಕಟವಾಗಿದೆ. ಮೂಲ ಪ್ರತಿಮೆಯು ನಾಲ್ಕು ದಿಕ್ಕಿಗೆ ನೋಡುತ್ತಿರುವ ನಾಲ್ಕು ಸಿಂಹಗಳನ್ನು ಒಳಗೊಂಡಿದೆ. ಆದರೆ ಹಿಂಬದಿಯ ಸಿಂಹದ ಮುಖ ಕಾಣುವುದಿಲ್ಲ. ಈ ಸಿಂಹಗಳ ಕೆಳಗಿನ ಪಟ್ಟಿಕೆಯಲ್ಲಿ ೨೪ ಹಲ್ಲುಗಳನ್ನು ಒಳಗೊಂಡ ಚಕ್ರದ ಚಿತ್ರವಿದೆ. ಇದರ ಬಲಗಡೆಗೆ ಎತ್ತಿನ ಚಿತ್ರವೂ, ಎಡಗಡೆಗೆ ಕುದುರೆಯ ಚಿತ್ರವೂ ಇದೆ. ಈ ಪಟ್ಟಿಕೆಯ ಹಿಂಭಾಗದಲ್ಲಿ ಸಿಂಹ ಹಾಗೂ ಆನೆಗಳ ಚಿತ್ರವಿದ್ದು ಇವು ಮುಂಭಾಗದಿಂದ ಕಾಣುವುದಿಲ್ಲ. ಈ ಪಟ್ಟಿಕೆಯು ಕೆಳಮುಖವಾಗಿರುವ ಅರಳಿದ ಕಮಲದ ಮೇಲೆ ಸ್ಥಾಪಿತವಾದಂತಿದೆ. ಪ್ರತಿಮೆಯಲ್ಲಿ ಕಾಣುವ ಪ್ರಾಣಿಗಳು ಸಾಹಸ, ಶ್ರಮ, ವೇಗ ಮತ್ತು ಶಕ್ತಿಯ ಪ್ರತೀಕವಾಗಿವೆ.

ಸ್ವತಂತ್ರ ಭಾರತದ ಮೊದಲ ಅಂಚೆಚೀಟಿಯು ವಿದೇಶೀ ಪತ್ರವ್ಯವಹಾರಗಳಿಗೆಂದು ಮೀಸಲಾಗಿತ್ತು. ಹೀಗಾಗಿ ಈ ಅಂಚೆಚೀಟಿಯು ದೇಶದ ಒಳಗಿನ ಪತ್ರವ್ಯವಹಾರಗಳಿಗೆಂದು ನಿಗದಿಯಾಯಿತು. ಒಂದೂವರೆ ಆಣೆಯ ಮುಖಬೆಲೆಯ ಈ ಅಂಚೆಚೀಟಿಯು ಕಂದು ಮಿಶ್ರಿತ ಹಸಿರು ಬಣ್ಣದಲ್ಲಿ ಮುದ್ರಣಗೊಂಡಿವೆ. ಅಶೋಕ ಸಿಂಹದ ಮೇಲ್ಭಾಗದಲ್ಲಿ “ಜಯ ಹಿಂದ್” ಎಂದೂ ಅದರ ಕೆಳಗೆ ೧೫ ಆಗಸ್ಟ ೧೯೪೭ ಎಂದೂ ಮುದ್ರಣವಾಗಿದೆ. ಒಂದು ಹಾಳೆಯಲ್ಲಿ ೧೪೪ರಂತೆ ಎರಡು ಕೋಟಿ ೨೭ ಲಕ್ಷ ಅಂಚೆಚೀಟಿಗಳು ಭಾರತ ಪ್ರತಿಭೂತಿ ಮುದ್ರಣಾಲಯದಲ್ಲಿ ಮುದ್ರಣಗೊಂಡಿವೆ. ಬಹುನಕ್ಷತ್ರ ಜಲಚಿಹ್ನೆಯುಳ್ಳ ಕಾಗದವನ್ನು ಇದಕ್ಕೆ ಬಳಸಲಾಗಿದೆ. ೧೩ ೧/೨ x ೧೪ ಅಳತೆಯ ಸಾಲುರಂಧ್ರಗಳನ್ನು ಇವು ಹೊಂದಿವೆ.

ಲೇಖಕರು: ಗಣೇಶ ಭಟ್
ಆಧಾರ: ಕಣಜ

Review Overview

User Rating: 4.53 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *