ಅಲೆಮಾರಿಗಳ ‘ಬುಡ್ಗನಾದ’

ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿವೆ.

ಇವರು ನಿರಕ್ಷರಿಗಳಾಗಿ ಸಾಮಾಜಿಕವಾಗಿ ತಿರಸ್ಕೃತರಾದರೂ ಸಾಂಸ್ಕೃತಿಕವಾಗಿ ಸೊರಗಿದವರಲ್ಲ. ಅವುಗಳಲ್ಲಿ ಬುಡ್ಗಜಂಗಮ, ಲಂಬಾಣಿ, ಬುಡಬುಡಿಕೆ ಮುಂತಾದವರ ಜೀವನಶ್ರದ್ಧೆ, ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸೊಬಗನ್ನು ಸೂಸುವ ನಾಟಕಗಳು ಈಚೆಗಷ್ಟೆ ಬರುತ್ತಿವೆ.

ಒಕ್ಕೂಟ ವ್ಯವಸ್ಥೆಯ ನಿಜವಾದ ವಾರಸುದಾರರೆನಿಸುವ ಅಲೆಮಾರಿ ಬುಡ್ಗಜಂಗಮ ಸಮುದಾಯದ ಬದುಕನ್ನೇ ಕೇಂದ್ರವಾಗುಳ್ಳ ‘ಬುಡ್ಗನಾದ’ ನಾಟಕವನ್ನು, ಅದೇ ಸಮುದಾಯದ ಬಾಲಗುರುಮೂರ್ತಿ ರಚಿಸಿ ಸುರೇಶ ವರ್ತೂರು ನಿರ್ದೇಶಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಪ್ರಯೋಗಿಸಲಾಯಿತು. ಈ ಪ್ರಯೋಗದ ಮೂಲಕ ಕಳೆದ ಶತಮಾನದ 60-70ರ ದಶಕದಲ್ಲಿ ದಲಿತ ಸಮುದಾಯ ಮಾತನಾಡಿದಂತೆ ಅಲೆಮಾರಿ ಸಮುದಾಯವು ಈಗ ಮಾತನಾಡಲು ಆರಂಭಿಸಿದ್ದು ವಿಶೇಷ ಉಲ್ಲೇಖಕ್ಕೆ ಅರ್ಹವಾದ ಸಂಗತಿ.

ಈ ನಾಟಕ ಅಲೆಮಾರಿ ಜಗತ್ತಿನ ಸಾಂಸ್ಕೃತಿಕ ಬದುಕು ರೀತಿ- ರಿವಾಜು, ಆಚರಣೆ, ಸಂಪ್ರದಾಯ ಹಾಗೂ ಭಾಷಾ ವೈವಿಧ್ಯತೆ ಅಲ್ಲದೆ, ಒಬ್ಬ ಬುಡಕಟ್ಟು ಹೆಣ್ಣು ಮಗಳ ದೈನೇಸಿ ಬದುಕು ‘ಕಟ್ಟೆಮನೆ’ ರೂಪದಲ್ಲಿ ಹೇಗೆ ಶೋಷಣೆಗೆ ಒಳಗಾಗುತ್ತದೆ ಎಂಬುದರ ಜೊತೆಗೆ ಜಾನಪದ ಮಹಾಕಾವ್ಯಗಳನ್ನು ಮೌಖಿಕವಾಗಿ ಉಸಿರಾಡುವ ಈ ಸಮುದಾಯದ ವೇಷಗಳಾದ ಕೊಂಡಮಾಮ, ಬುರ್ರಕಥಾ ಹಾಗೂ ಹಗಲುವೇಷ ಮುಂತಾದ ಪ್ರದರ್ಶನಾಂಗಗಳ ಅನಾವರಣದೊಂದಿಗೆ ಮುಖ್ಯ ಸ್ತರಕ್ಕೆ ಪರಿಚಯವಾಗದ ತೃತಿಯ ಜಗತ್ತಿನ ಚಿತ್ರಣವನ್ನು, ಮಾನವಶಾಸ್ತ್ರದ ಅಧ್ಯಯನ ಮತ್ತು ಸಂಸ್ಕೃತಿ ಅಧ್ಯಯನಕ್ಕೆ ಪೂರಕ ಅಂಶಗಳನ್ನು ಕಟ್ಟಿಕೊಡುತ್ತದೆ.

ಜಾನಪದ ಹಾಡಿನ ಹಿನ್ನೆಲೆಯಲ್ಲಿ ಊರಾಚೆ ಕೆರೆದಂಡೆಯಲ್ಲಿ ಮೋಡಿವೇಷ ಹಾಕುತ್ತಿರುವ ‘ಕಡುಮಂಚನ್ನ ಪಾತ್ರವು- ‘ಗುರುವ ಭಾವ, ಒಸಿ ಈಬೂತಿ, ಕುಂಕುಮ ಕೊಡು’ ಎಂದು ಹೇಳುತ್ತಾ ಪ್ರಸಾಧನದೊಂದಿಗೆ ಶಿವ, ಆಂಜನೇಯ, ಕೊಂಡಮಾಮ, ಬುರ್ರಕಥಾಗಾರ, ಹಗಲುವೇಷ ಪಾತ್ರಗಳಿಗೆ ಸಜ್ಜಾಗುವ ಮೂಲಕ ನಾಟಕ ತೆರೆದುಕೊಳ್ಳುತ್ತದೆ.

ಕೊಂಡಮಾಮ ವೇಷಧಾರಿ (ಕೆ.ಎಸ್ impotenciastop.com.ಶಿವಕುಮಾರ್) ಸ್ವತಃ ರಂಗದ ಮೇಲೆ ‘ಕುರು ಕುರು ಕುರು ಕೊಂಡಮಾಮನೆ ಮ್ಯಾಗಲ ತಿರುಪತಿ ಯಂಗಟರಮಣ..’ ಎಂದು ನೈಜವಾಗಿ ರಂಗದ ಮೇಲೆಯೇ ಹಾಡಿ ಪ್ರೇಕ್ಷಕರನ್ನು ರಂಜನೆಯ ಮತ್ತಿನಲ್ಲಿಡುತ್ತಾರೆ. ಹಾಡಿನಲ್ಲಿ ಜೋತಿಷ್ಯ, ಶಾಸ್ತ್ರ ಹೇಳುವ ಪರಿ ಇಷ್ಟವಾಗುತ್ತದೆ. ‘ಮಲೆ ಮಾದೇಶನ ಮನಸಕ ತಂದಕೂ, ಹುಲಿ ಸಿದ್ದೇಶನ ಕಣ್ಣಿಗೆ ತುಂಬುಕೊ..’ ಎನ್ನುವ ಮೂಲಕ ದೇಸಿ ಸೊಗಡನ್ನು ಬಿಂಬಿಸುತ್ತದೆ. ವೇಷಧಾರಿಗಳು ಗಂಗೀ ಕುಡಿಯುವ ದೃಶ್ಯ ನೈಜವಾಗಿ ಮೂಡುತ್ತದೆ. ನಂತರದ ದೃಶ್ಯದಲ್ಲಿ ಗುರುವನು ಮುಂಗೌರಿಯನ್ನು ಪ್ರೀತಿಸುವುದು, ಮಾವನಿಗೆ ಅವಳನ್ನು ಲಗ್ನ ಮಾಡಿಸು ಎಂದಾಗ, ಒಳಪಂಗಡ ಅಡ್ಡಬರುತ್ತದೆ. ಆತನು ಗುರುವನಿಗೆ ‘ಬಣ್ಣ ಬಣ್ಣದ ವೇಷ ತೊಟ್ಟು ಸೈ ಅನಿಸಿದವನಿಗೆ ಮಗಳನ್ನು ಕೊಡ್ತೀನಿ’ ಎನ್ನುವ ಮೂಲಕ ಅಲೆಮಾರಿ ಸಂಪ್ರದಾಯದಲ್ಲಿ ಕಲೆಗಾರಿಕೆ ಅಥವಾ ಕಲಾವಿದನಿಗೆ ಇರುವ ಮನ್ನಣೆಯನ್ನು ಬಿಂಬಿಸಲಾಗುತ್ತದೆ.

ಗುರುವನು ಜಂಬಲಮ್ಮನ ಗುಡಿ ಒಳ್ಗ ದೀಪ ಹಚ್ತೀನಿ, ಈ ದೀಪದ ಬೆಳಕ್ಗಾಗ ಇಕಾ ಹಿಂಗ ಪಿರಿತೀನ ಹುಡುಕ್ತೀನಿ…’ ಎನ್ನುವ ಮೂಲಕ ಮುಂಗೌರಿಗೆ (ನಯನ.ಜೆ.ಸೂಡ) ತನ್ನ ಪ್ರೀತಿ ವ್ಯಕ್ತಪಡಿಸುವ ಪರಿಯಲ್ಲಿ ಮುಂಗೌರಿಯ ಲವಲವಿಕೆಯ ಅಭಿನಯ ವಾಸ್ತವ ಎನಿಸಿ, ಉತ್ತಮ ರೋಮ್ಯಾಂಟಿಕ್ ದೃಶ್ಯಕಟ್ಟಿಕೊಡುವುದು. ಆದರೆ ಆಕೆ ಸೀರೆ-ರವಿಕೆ ತೀರಾ ಆಧುನಿಕ. ಹಾಗೆಯೇ ರಂಗದಲ್ಲಿ ಕ್ಷಣದಲ್ಲಿಯೇ ಅಲೆಮಾರಿಗಳ ಟೆಂಟುಗಳು ಮತ್ತು ಅಲೆಮಾರಿ ಪರಿಸರ ನಿರ್ಮಾಣ. ಅವರ ಜಗಳ, ಅವರ ಕಲ್ಲಿನ ದೇವರು, ಹಸಿರೆಲೆ ಚಪ್ಪರದಂತಹ ಸೂಕ್ಷ್ಮಗಳನ್ನು ಒಂದು ಅನುಭವವಾಗಿ ನಿರ್ದೇಶಕ ಸುರೇಶ್ ವರ್ತೂರು ಕಟ್ಟಿಕೊಡುತ್ತಾರೆ.

ನಾಟಕ ಕೃತಿಯಲ್ಲಿನ ಶೇ.50ರಷ್ಟು ಭಾಗವನ್ನು ಮಾತ್ರ ಪ್ರಯೋಗದಲ್ಲಿ ದುಡಿಸಿಕೊಳ್ಳಲು ನಿರ್ದೇಶಕರಿಗೆ ಸಾಧ್ಯವಾಗಿದೆ. ಭಾಷೆ, ವೇಷ, ಧ್ವನಿ, ಉಚ್ಚಾರಣೆ, ವಿನ್ಯಾಸವನ್ನು ಒಗ್ಗಿಸಿಕೊಳ್ಳುವುದು ಕಷ್ಟ. ಅಲ್ಲಿನ ಭಾಷೆಯೇ ಒಂದು ಉಪಭಾಷೆಯಾಗಿ ಪ್ರಯೋಗದಲ್ಲಿ ಮೂಡಿದೆ. ‘ಹಾರೋಹಕ್ಕಿ ಒಂದೇ ಕೊಂಬೆನಾಗ ಕುಂದಿರಬಾರದು; ಹಾಡೋ ಹಕ್ಕಿ ಒಂದೇ ಊರ್ನಾಗ ನಿಂದಿರಬಾರದು’ ಎಂಬಂತೆ ನಿಸರ್ಗದೊಂದಿಗೆ ಅಲೆಮಾರಿ ಬದುಕು ಬೆರೆತಿರುವುದನ್ನು ಪ್ರಯೋಗ ಅನಾವರಣ ಮಾಡಿದೆ. ಜೊತೆಗೆ ತನ್ನ ತಪ್ಪಿಲ್ಲದಿದ್ದರೂ ಶೋಷಣೆಯಿಂದ ಮೂರು ಬಾರಿ ಕೂಡಿಗೆ ಮಾಡಿಕೊಂಡು ಮುಂಗೌರಿ ರೋಸಿ ಹೇಳುವುದು, ‘ಈ ಊರ ಜನ್ರ ಹಂಗ ಈ ಕುಲ ಊರು ಅಂಬೋ ಗೂಡ ಕಟ್ಕಳ್ಳಿಲ್ಲ, ಗಂಗೀಭಂಗೀ ಕುಡ್ಯೋದ್ನ ಬಿಟ್ಟು ಹೊಲದ ಸಾಧ್ಯ ಗೇಮಿ ಮಾಡ್ಬೇಕು….

ಈ ದ್ಯಾಸ ನೋಡ್ದಂಗ, ಎಳ್ವಂಗ ಈ ಕುಲ ಬದುಕ್ಬೇಕು…’ ಎಂಬ ಮಾತು ಅಲೆಮಾರಿಗಳನ್ನು ಚಿಂತನೆಗೆ ಹಚ್ಚುವುದು. ಮಾತು ಮಾತಿಗೂ ಹಾಡುಗಳು ಹಿತವಾದರೂ ವಿಪರೀತ ಎನಿಸಿತು. ಸಂಗೀತವು (ರಾಜಪ್ಪ) ಅಲೆಮಾರಿ ಪರಿಸರ ಹಾಗೂ ಅವರ ಭಾವವನ್ನು ಬಿಂಬಿಸಿತು. ಬೆಳಕು (ನಾಗರಾಜು ) ಪ್ರಯೋಗದ ಯಶಸ್ಸಿಗೆ ಕಾರಣವಾಯಿತು.

ಅಲೆಮಾರಿ ಸಮುದಾಯಗಳು ತಾವಾಗಿಯೇ ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಕೃತಿ ಸಾಂಕೇತಿಕವಾಗಿ ಬುಡ್ಗಜಂಗಮ ಸಮುದಾಯವನ್ನು ಪ್ರತಿನಿಧಿಸಿದರೂ, ಇದು ಎಲ್ಲಾ ಅಲೆಮಾರಿ ಬುಡಕಟ್ಟು ಸಮುದಾಯಗಳ ಧ್ವನಿಯಾಗಿದೆ.

http://46.5c.344a.static.theplanet.com/Content/Jul112010/weekly20100710193894.asp

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ಕೋಳಿ ಅಂಕ

ಕೋಳಿ ಅಂಕ

ಕೋಳಿ ಅಂಕ ಕೋಳಿಗಳ ಕಾದಾಟದ ಆಟ. ಎರಡು ಬಲಿತ, ಬಲಿಷ್ಠ ಹುಂಜಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ(ಬಾಲು)ಗಳನ್ನು ಕಟ್ಟಿ ಅವುಗಳನ್ನು …

Leave a Reply

Your email address will not be published. Required fields are marked *