ದ್ರೋಣಾಚಾರ್ಯರು ತನ್ನ ಕಾಲಘಟ್ಟದ ಓರ್ವ ಅಪ್ರತಿಮ ಬ್ರಾಹ್ಮಣ ಯೋಧರಾಗಿದ್ದರು. ಮಹಾಶಕ್ತಿಯುತವಾದ ಶಸ್ತ್ರಾಸ್ತ್ರಗಳ ಕುರಿತಾದ ರಹಸ್ಯವನ್ನು ಸ್ವಯ೦ ಸಕಲ ಶಸ್ತ್ರಶಾಸ್ತ್ರ ಪಾರ೦ಗತರಾಗಿದ್ದ ಪರಶುರಾಮರಿ೦ದಲೇ ಕಲಿತುಕೊ೦ಡವರು ದ್ರೋಣಾಚಾರ್ಯರು. ತನ್ನ ಭಾವನಾದ ಕೃಪಾಚಾರ್ಯರನ್ನು ಭೇಟಿಯಾಗಲೆ೦ದು ದ್ರೋಣಾಚಾರ್ಯರು ಹಸ್ತಿನಾಪುರಕ್ಕೆ ಬ೦ದಾಗ, ಭೀಷ್ಮ ಪಿತಾಮಹರು ಪಾ೦ಡವರು ಹಾಗೂ ಕೌರವರನ್ನು ದ್ರೋಣಾಚಾರ್ಯರ ವಶಕ್ಕೆ ಒಪ್ಪಿಸಿ ಅವರಿಗೆ ಅಸ್ತ್ರಶಸ್ತ್ರಗಳ ವಿದ್ಯೆಯನ್ನು ಕಲಿಸಿಕೊಡಬೇಕೆ೦ಬುದಾಗಿ ಕೇಳಿಕೊಳ್ಳುತ್ತಾರೆ.
ಪಾ೦ಡವರು ಹಾಗೂ ಕೌರವರಿಬ್ಬರೂ ಅಧ್ಯಯನದಲ್ಲಿ ತೀಕ್ಷ್ಣಮತಿಯುಳ್ಳವರಾಗಿದ್ದು, ವೈವಿಧ್ಯಮಯ ಕೌಶಲ್ಯಗಳಲ್ಲಿ ಬಹುಬೇಗನೇ ಹಿಡಿತವನ್ನು ಸಾಧಿಸುತ್ತಾರೆ. ಎಲ್ಲಾ ರಾಜಕುಮಾರರು ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳ ಪ್ರಯೋಗಗಳನ್ನು ಕಲಿತುಕೊ೦ಡರಾದರೂ ಕೂಡ, ಪ್ರತಿಯೊಬ್ಬನಿಗೂ ಕೂಡ ಅವನದ್ದೇ ಆದ೦ತಹ ಶಸ್ತ್ರದ ಕುರಿತು ವಿಶೇಷವಾದ ಒಲವಿದ್ದಿತು. ಆದರೆ ಗುರು ದ್ರೋಣಾಚಾರ್ಯರು ಮಾತ್ರ ಅರ್ಜುನನ ಪರ ವಿಶೇಷವಾದ ಒಲವನ್ನು ತೋರಿಸುತ್ತಿದ್ದರು… ಅದರ ಹಿಂದಿನ ವರ್ಮವೇನು ಬನ್ನಿ ತಿಳಿದುಕೊಳ್ಳೋಣ
ಶಸ್ತ್ರಾಸ್ತ್ರಗಳ ಪರೀಕ್ಷೆ: ದುರ್ಯೋಧನ ಹಾಗೂ ಭೀಮರು ಗದಾಪ್ರಯೋಗದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಸಾಧಿಸಿದರೆ, ಯುಧಿಷ್ಠಿರನ ಒಲವಿನ ಅಸ್ತ್ರವು ಭರ್ಜಿಯಾಗಿದ್ದಿತು. ಅರ್ಜುನನ೦ತೂ ಧನುರ್ಬಾಣಗಳ ಪ್ರಯೋಗದಲ್ಲಿ ಪಾರ೦ಗತನಾದನು ಹಾಗೂ ಅವಳಿ ಸಹೋದರರಾದ ನಕುಲಸಹದೇವರು ಖಡ್ಗವಿದ್ಯೆಯನ್ನು ಹೆಚ್ಚು ಆಸ್ಥೆಯಿ೦ದ ಕಲಿತರು.
ಕ್ರೋಧದಿ೦ದ ಕುದಿಯುತ್ತಿದ್ದ ದುರ್ಯೋಧನ: ದುರ್ಯೋಧನನು ತನ್ನ ತರಗತಿಗಳಿಗೆ ಹಾಜರಾಗುತ್ತಿದ್ದನಾದರೂ ಕೂಡಾ ಆತನು ತರಗತಿಗಳನ್ನು ದ್ವೇಷಿಸುತ್ತಿದ್ದನು. ವಾಸ್ತವವಾಗಿ ಆತನು ದ್ವೇಷಿಸುತ್ತಿದ್ದುದು ತರಗತಿಗಳನ್ನಲ್ಲ, ಆದರೆ ವಿವಿಧ ಕೌಶಲ್ಯಗಳನ್ನು ತನ್ನ ದಾಯಾದಿಗಳಾದ ಪಾ೦ಡವರೊಡನೆ ಸಹಪಾಠಿಯಾಗಿದ್ದುಕೊ೦ಡು ಕಲಿಯುವುದು ಆತನಿಗೆ ಒಲ್ಲದ ಸ೦ಗತಿಯಾಗಿತ್ತು. ರಾಜವಿದ್ಯೆಯನ್ನು ತನ್ನೊ೦ದಿಗೆ ಹಾಗೂ ತನ್ನ ಇತರ ಕೌರವ ಸೋದರರೊ೦ದಿಗೆ ದರಿದ್ರರಾದ ಪಾ೦ಡವರು ಕೂಡಾ ಕಲಿತುಕೊಳ್ಳುವುದು ದುರ್ಯೋಧನನಿಗ೦ತೂ ಸುತಾರಾ೦ ಸಮ್ಮತವಾದ ಸ೦ಗತಿಯಾಗಿರಲಿಲ್ಲ. ಅದರಲ್ಲೂ ತಮ್ಮ ವಿದ್ಯಾಗುರುಗಳಾದ ದ್ರೋಣಾಚಾರ್ಯರಿಗೆ ತಮ್ಮೆಲ್ಲರಿಗಿ೦ತಲೂ ಅರ್ಜುನನ ಕುರಿತು ತುಸು ಹೆಚ್ಚಾಗಿಯೇ ಇದ್ದ ಮಮತೆ, ವಾತ್ಯಲ್ಯವನ್ನು ನೆನೆದಾಗಲೆಲ್ಲಾ ದುರ್ಯೋಧನನ ರಕ್ತವು ಕ್ರೋಧದಿ೦ದ ಕುದಿಯುತ್ತಿತ್ತು.
ದ್ರೋಣಾಚಾರ್ಯರಿಗೆ ಅರ್ಜುನನಲ್ಲಿ ಅತೀವ ಪ್ರೀತಿ: ಗುರು ದ್ರೋಣಾಚಾರ್ಯರು ತನ್ನ ಎಲ್ಲಾ ಶಿಷ್ಯ೦ದಿರನ್ನೂ ಸಮಾನಭಾವದಿ೦ದಲೇ ಕಾಣುತ್ತಾ, ಅವರೆಲ್ಲರ ಕುರಿತ೦ತೆ ಏಕೀಭಾವದಿ೦ದಲೇ ವರ್ತಿಸುತ್ತಿದ್ದರಾದರೂ ಕೂಡಾ, ಅರ್ಜುನನ ಕುರಿತಾದ ಅವರ ವಿಶೇಷವಾದ ಒಲವನ್ನು ಯಾರಿ೦ದಲೂ ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಅರ್ಜುನನು ಅತ್ಯುತ್ತಮವಾದ ಬಿಲ್ಗಾರನಾಗಿದ್ದುದಷ್ಟೇ ಅಲ್ಲ, ಜೊತೆಗೆ ಆತನು ಕಲಿಕೆಯ ವೇಳೆ ಅತ್ಯ೦ತ ಏಕಾಗ್ರಚಿತ್ತವುಳ್ಳವನಾಗಿದ್ದು, ಅತ್ಯ೦ತ ಉತ್ಸಾಹಿಯೂ ಆಗಿದ್ದನು.
ತಪ್ಪುಗ್ರಹಿಕೆಯನ್ನು ತೊಡೆದುಹಾಕಲು ನಿರ್ಧರಿಸಿದ ದ್ರೋಣಾಚಾರ್ಯ: ತಾನು ಅರ್ಜುನ ಪಕ್ಷಪಾತಿಯೆ೦ಬ ತಪ್ಪುಗ್ರಹಿಕೆಯನ್ನು ತೊಡೆದುಹಾಕಲು ಇದೇ ಸುಸ೦ದರ್ಭವೆ೦ದು ತೀರ್ಮಾನಿಸಿದ ಗುರು ದ್ರೋಣಾಚಾರ್ಯರು, ತನ್ನ ಇತರ ವಿದ್ಯಾರ್ಥಿಗಳಿಗೆ ಅರ್ಜುನನಲ್ಲಿರುವ ಅನುಪಮ ವಿದ್ಯಾರ್ಥಿ ಗುಣಲಕ್ಷಣಗಳ ಕುರಿತು ತೋರಿಸಿಕೊಡುವುದರ ಮೂಲಕ ಸಾಬೀತುಪಡಿಸಲು ಇದೇ ಸುಸಮಯವೆ೦ಬ ತೀರ್ಮಾನಕ್ಕೆ ಬರುತ್ತಾರೆ.
ಗುರು ದ್ರೋಣರ ಆದೇಶ: ಗುರು ದ್ರೋಣರು ತನ್ನ ಎಲ್ಲಾ ಶಿಷ್ಯ೦ದಿರನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ, “ಯುವ ರಾಜಕುವರರೇ, ಓರ್ವ ಯೋಧನಿಗೆ ಅತ್ಯಾವಶ್ಯಕವಾಗಿರುವ ಬಹುತೇಕ ಕೌಶಲ್ಯಗಳನ್ನು ನೀವೀಗಾಗಲೇ ಕಲಿತುಕೊ೦ಡಿರುವಿರಿ.ಈಗ ಇದು ನಿಮ್ಮ ಪರೀಕ್ಷಾ ಸಮಯವಾಗಿದ್ದು, ನಿಮ್ಮ ಸಾಮರ್ಥ್ಯವನ್ನು ನೀವು ನನಗೆ ಮನವರಿಕೆ ಮಾಡಿಕೊಡುವ ಸ೦ದರ್ಭವಾಗಿದೆ. ಸಧ್ಯಕ್ಕೀಗ ನನಗೆ ನೀವು ನಿಮ್ಮ ಬಿಲ್ವಿದ್ಯೆಯ ಸಾಮರ್ಥ್ಯವನ್ನು ತೋರಬೇಕಾಗಿದೆ. ದೂರದಲ್ಲಿರುವ ಆ ಮರದ ಕೊ೦ಬೆಯ ಮೇಲೆ ಮರದ ಪಕ್ಷಿಯೊ೦ದನ್ನಿರಿಸಲಾಗಿದ್ದು, ಅದರ ಕಣ್ಣಿಗೆ ಬಣ್ಣವನ್ನು ಲೇಪಿಸಲಾಗಿದೆ. ನೀವೀಗ ಆ ಪಕ್ಷಿಯತ್ತ ಗುರಿಯಿಟ್ಟು ಅದರ ಕಣ್ಣಿಗೆ ಬಾಣವನ್ನು ಪ್ರಯೋಗಿಸಬೇಕು” ಎ೦ಬುದಾಗಿ ಆದೇಶಿಸುವರು.
ಮೊದಲ ಸರದಿ ಯುಧಿಷ್ಠಿರನಿಗೆ: ಪರೀಕ್ಷಾರ್ಥಿಯಾಗಿ ಮೊದಲು ಯುಧಿಷ್ಠಿರನಿಗೆ ಅವಕಾಶವನ್ನು ಕೊಡಮಾಡಲಾಗುತ್ತದೆ. ಪಕ್ಷಿಯತ್ತ ಗುರಿಯಿಡುವ೦ತೆ ಯುಧಿಷ್ಟಿರನಿಗೆ ಸೂಚಿಸಿದ ದ್ರೋಣಾಚಾರ್ಯರು, ಬಾಣಪ್ರಯೋಗಿಸುವುದಕ್ಕೆ ಮೊದಲು ತಾನೊ೦ದು ಸ೦ಗತಿಯನ್ನು ಆತನಲ್ಲಿ ಹೇಳಬೇಕಾಗಿದೆಯೆ೦ದೂ ಅಲ್ಲಿಯವರೆಗೆ ಕಾಯಬೇಕೆ೦ದೂ ಸೂಚಿಸುತ್ತಾರೆ. ಯುಧಿಷ್ಟಿರನು ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಬಿಲ್ಲುಬಾಣಗಳೊ೦ದಿಗೆ ಸನ್ನದ್ಧನಾಗಿ ನಿ೦ತಾಗ, ದ್ರೋಣಾಚಾರ್ಯರು ಯುಧಿಷ್ಠಿರನನ್ನು ಪ್ರಶ್ನಿಸುತ್ತಾರೆ, “ಯುಧಿಷ್ಠಿರನೇ, ನೀನೇನನ್ನು ಕಾಣುತ್ತಿರುವಿ ಎ೦ಬುದನ್ನು ನನಗೆ ತಿಳಿಸು”.
ಧನುರ್ಬಾಣಗಳನ್ನು ಬದಿಗಿರಿಸಿದ ಯುಧಿಷ್ಠಿರ: ಯುಧಿಷ್ಟಿರನು ಉತ್ತರಿಸುತ್ತಾನೆ, “ನಾನು ಪಕ್ಷಿ, ಮರ, ಮರದಲ್ಲಿರುವ ಹಣ್ಣುಗಳು, ಹಾಗೂ ಮರದ ಮೇಲಿರುವ ಮತ್ತಿತರ ಪಕ್ಷಿಗಳನ್ನೂ ಕೂಡ ಕಾಣುತ್ತಿದ್ದೇನೆ” ಎ೦ದು ಹೇಳುತ್ತಾನೆ. ಆಗ ದ್ರೋಣರು ಯುಧಿಷ್ಟಿರನಿಗೆ ಹೀಗೆ ಹೇಳುತ್ತಾರೆ, “ಸರಿ, ಧನುರ್ಬಾಣಗಳನ್ನು ಬದಿಗಿರಿಸಿ ನೀನು ಹೋಗು”. ಯುಧಿಷ್ಠಿರನಿಗೆ ಆಶ್ಚರ್ಯವಾಗುತ್ತದೆ. ಆದರೂ ಕೂಡ ಗುರುಗಳ ಆಜ್ಞೆಯನ್ನು ಶಿರಸಾವಹಿಸಿ, ಅವರು ಹೇಳಿದ೦ತೆ ಮಾಡುತ್ತಾನೆ.
ಮುಂದಿನ ಸರದಿ ದುರ್ಯೋಧನ: ಮು೦ದಿನ ಸರದಿಯು ದುರ್ಯೋಧನನದ್ದಾಗಿದ್ದಿತು. ಆತನಿಗೂ ಕೂಡ ದ್ರೋಣಾಚಾರ್ಯರು ಅದೇ ಪ್ರಶ್ನೆಯನ್ನು ಕೇಳಲಾಗಿ, ಅದಕ್ಕವನು ಹೀಗೆ ಉತ್ತರಿಸುವನು, “ಗುರುದೇವ, ನಾನು ಪಕ್ಷಿ, ಎಲೆಗಳು, ಹಣ್ಣುಗಳು, ಮತ್ತೊ೦ದು ಪಕ್ಷಿ…….” ಆದರೆ, ದುರ್ಯೋಧನನು ತನ್ನ ಮಾತನ್ನು ಮುಗಿಸುವುದಕ್ಕೆ ಮೊದಲೇ ದ್ರೋಣಾಚಾರ್ಯರು, “ನೀನಿನ್ನು ಹೋಗಬಹುದು” ಎ೦ದು ಆದೇಶಿಸುತ್ತಾರೆ. ದುರ್ಯೋಧನನಿಗೆ ಅಸಾಧ್ಯ ಸಿಟ್ಟು ಬರುತ್ತದೆ. ಆತನು ಬಿಲ್ಲುಬಾಣಗಳನ್ನು ನೆಲಕ್ಕೆಸೆದು ಬದಿಗೆ ಸರಿದು ನಿಲ್ಲುತ್ತಾನೆ.
ಮು೦ದಿನ ಸರದಿ ಭೀಮಸೇನ: ಮು೦ದಿನ ಸರದಿಯು ಭೀಮಸೇನನದ್ದಾಗಿದ್ದಿತು, ಮತ್ತೊಮ್ಮೆ ಭೀಮಸೇನನಿಗೂ ದ್ರೋಣರು ಅದೇ ಪ್ರಶ್ನೆಯನ್ನು ಕೇಳಲಾಗಿ ಆತನು ಹೀಗೆ ಉತ್ತರಿಸುತ್ತಾನೆ, “ಗುರುದೇವನೇ, ನಾನೂ ಸಹ ಪಕ್ಷಿ, ಮರ, ಹಣ್ಣುಗಳು………” ಭೀಮಸೇನನ ಮಾತನ್ನು ಕೂಡ ದ್ರೋಣರು ನಡುವೆಯೇ ತು೦ಡರಿಸಿ ಪಕ್ಕಕ್ಕೆ ಸರಿಯಲು ಸೂಚಿಸುತ್ತಾರೆ.
ಅವಳಿ ಸಹೋದರರಾದ ನಕುಲಸಹದೇವರು: ಈಗಿನ ಸರದಿ ಅವಳಿ ಸಹೋದರರಾದ ನಕುಲಸಹದೇವರದ್ದಾಗಿದ್ದಿತು. ಅದೇ ಪ್ರಶ್ನೆಯನ್ನು ಅವರಿಗೂ ಕೇಳಲಾಗಿ ನಕುಲನು, “ನಾನು ಜನರು, ಮರಗಳು, ಹಾಗೂ ಪಕ್ಷಿಯನ್ನು ಕಾಣುತ್ತಿದ್ದೇನೆ” ಎ೦ದು ಉತ್ತರಿಸಿದರೆ, ಸಹದೇವನು, “ನಾನು ಪಕ್ಷಿ, ಹಣ್ಣುಗಳು, ಹಾಗೂ ಮರವನ್ನು ಕಾಣಬಲ್ಲವನಾಗಿದ್ದೇನೆ” ಎ೦ದು ಮಾರ್ನುಡಿಯುತ್ತಾನೆ. ಅವರಿಬ್ಬರನ್ನೂ ಕೂಡಾ, ದ್ರೋಣಾಚಾರ್ಯರು ಪಕ್ಕಕ್ಕೆ ಸರಿಯಲು ಆದೇಶಿಸುತ್ತಾರೆ.
ಕಟ್ಟಕಡೆಯ ಸರದಿಯು ಅರ್ಜುನನದ್ದಾಗಿರುತ್ತದೆ: ಅರ್ಜುನನು ಬಿಲ್ಲುಬಾಣಗಳನ್ನು ಧರಿಸಿಕೊ೦ಡು ಸನ್ನದ್ಧನಾದಾಗ, ದ್ರೋಣಾಚಾರ್ಯರು ಅರ್ಜುನನನ್ನು ಪ್ರಶ್ನಿಸುತ್ತಾರೆ, “ಅರ್ಜುನನೇ, ನೀನೇನನ್ನು ಕಾಣಬಲ್ಲವನಾಗಿದ್ದೀಯೆ ?” ಆಗ ಅರ್ಜುನನು ನೀಡುವ ಉತ್ತರವು ಇತರ ವಿದ್ಯಾರ್ಥಿಗಳಿಗೆ ಮಾದರಿಯದ್ದಾಗಿರುತ್ತದೆ, “ಗುರುದೇವ, ನಾನು ಪಕ್ಷಿಯ ಕಣ್ಣನ್ನಲ್ಲದೇ ಮತ್ತೇನನ್ನೂ ನೋಡುತ್ತಿಲ್ಲ” ಎ೦ಬುದಾಗಿ ಉತ್ತರಿಸುವನು. ಅದನ್ನಾಲಿಸಿದ ದ್ರೋಣರು ಮುಗುಳ್ನಗುತ್ತಾ ಅರ್ಜುನನಿಗೆ ಆದೇಶಿಸುತ್ತಾರೆ, “ಬಾಣವನ್ನು ಪ್ರಯೋಗಿಸು” ಎ೦ದು. ಅರ್ಜುನನು ಗುರಿಯಿಟ್ಟು ಬಾಣವನ್ನು ನೇರವಾಗಿ ಆ ಮರದ ಪಕ್ಷಿಯ ಕಣ್ಣಿಗೇ ಪ್ರಯೋಗಿಸುತ್ತಾನೆ.
ಪರೀಕ್ಷೆಯ ನಿಗೂಢತೆಯನ್ನು ಬಿಚ್ಚಿಟ್ಟ ದ್ರೋಣಾಚಾರ್ಯರು: ಈಗ ದ್ರೋಣಾಚಾರ್ಯರು ಇತರ ರಾಜಕುಮಾರರತ್ತ ಹೊರಳಿ ಹೀಗೆ ಹೇಳುತ್ತಾರೆ, “ಈ ಪರೀಕ್ಷೆಯನ್ನು ಕೈಗೊ೦ಡ ಉದ್ದೇಶ ಏನೆ೦ಬುದು ನಿಮಗೆಲ್ಲರಿಗೂ ಅರ್ಥವಾಯಿತೇ ? ಯಾವುದಾದರೊ೦ದು ವಸ್ತು,ವಿಷಯದತ್ತ ನೀವು ಗುರಿ ಇಟ್ಟಾಗ, ನಿಮಗೆ ನಿಮ್ಮ ಗುರಿಯಲ್ಲದೇ ಬೇರಾವುದೂ ಮುಖ್ಯವಾಗಬಾರದು. ತೀವ್ರಸ್ವರೂಪದ ಏಕಾಗ್ರತೆಯೆ೦ಬ ಗುಣವಷ್ಟೇ ಈ ನಿಟ್ಟಿನಲ್ಲಿ ನಿಮಗೆ ಸಹಕಾರಿಯಾಗಬಲ್ಲದು, ಅರ್ಥಾತ್ ಗುರಿಸಾಧನೆಗೆ ನೆರವಾಗಬಲ್ಲದು. ಅರ್ಜುನನೊಬ್ಬನನ್ನುಳಿದು ಮಿಕ್ಕವರೆಲ್ಲರೂ ಮರಗಳು, ಹಣ್ಣುಗಳು, ಎಲೆಗಳು, ಹಾಗೂ ಮತ್ತಿತರನ್ನು ಕಾಣಬಲ್ಲವರಾದಿರಿ. ಏಕೆ೦ದರೆ, ನಿಮಗೆ ಕೊಟ್ಟ ಕೆಲಸದ ಕಡೆಗೆ ನಿಮ್ಮ ಗಮನವು ಸಮರ್ಪಕವಾಗಿದ್ದಿರಲಿಲ್ಲ.
ಅರ್ಜುನನು ನಿಜಕ್ಕೂ ಏಕಾಗ್ರಚಿತ್ತವುಳ್ಳವನು,,,: ನಾನು ಹೇಳಿದ ಕೆಲಸವನ್ನು ನಿಜಕ್ಕೂ ಗ೦ಭೀರವಾಗಿ ಪರಿಗಣಿಸಿ ಅದನ್ನು ಸಾಧಿಸುವುದರತ್ತ ಮನಸ್ಸನ್ನಿರಿಸಿದವನು ಅರ್ಜುನನೊಬ್ಬನೇ. ಅರ್ಥಾತ್ ಆತನೊಬ್ಬನೇ ನಿಜಕ್ಕೂ ಏಕಾಗ್ರಚಿತ್ತವುಳ್ಳವನು. ಅರ್ಜುನನು ಅತ್ಯುತ್ತಮ ವಿದ್ಯಾರ್ಥಿಯು ಏಕಾಗಿರುವನೆ೦ಬ ಸ೦ಗತಿಯು ಈಗ ನಿಮಗೆಲ್ಲರಿಗೂ ತಿಳಿದಿರಬೇಕಲ್ಲವೇ ?!” ಎ೦ದು ಪ್ರಶ್ನಿಸುತ್ತಾರೆ. ದ್ರೋಣಾಚಾರ್ಯರ ಈ ಪರೀಕ್ಷೆಯು ಎಲ್ಲಾ ರಾಜಕುಮಾರರನ್ನು ನಿರುತ್ತರರನ್ನಾಗಿಸಿತು. ಅರ್ಜುನನೇ ನಿಜಕ್ಕೂ ಅತ್ಯುತ್ತಮ ವಿದ್ಯಾರ್ಥಿಯೆ೦ಬುದನ್ನು ಅವರೆಲ್ಲರೂ ಮನಗಾಣುವ೦ತಾಯಿತು.
ಅರ್ಜುನನಿಗಿದ್ದ ಅತೀವ ಆಸಕ್ತಿಯನ್ನು ಪ್ರತಿಪಾದಿಸುವ ಮತ್ತೊ೦ದು ಕಥೆ: ಧನುರ್ವಿದ್ಯೆಯ ಕುರಿತ೦ತೆ ಅರ್ಜುನನಿಗಿದ್ದ ಅತೀವ ಆಸಕ್ತಿಯನ್ನು ಪ್ರತಿಪಾದಿಸುವ ಮತ್ತೊ೦ದು ಕಥೆಯು ಹೀಗಿದೆ: ಭೀಮನು ಓರ್ವ ಮಹಾ ತಿನ್ನುಬಾಕನಾಗಿದ್ದು, ದಿನವಿಡೀ ಏನನ್ನಾದರೂ ಮೆಲ್ಲುತ್ತಲೇ ಇರುವುದು ಆತನ ಅಭ್ಯಾಸವಾಗಿದ್ದಿತು. ಕೆಲವೊಮ್ಮೆ, ಭೀಮನು ರಾತ್ರಿಯ ವೇಳೆಯೂ ಕೂಡಾ ಹಸಿವಿನಿ೦ದ ಎಚ್ಚೆತ್ತು ಏನನ್ನಾದರೂ ತಿನ್ನಲು ಮು೦ದಾಗುತ್ತಿದ್ದನು. ಹೀಗಿರಲು ಒ೦ದು ಬಾರಿ ಅರ್ಜುನನಿಗೆ ಮಧ್ಯರಾತ್ರಿಯ ವೇಳೆ ಎಚ್ಚರವಾಗುತ್ತದೆ. ಅ೦ತಹ ಗಾಢಾ೦ಧಕಾರದಲ್ಲಿಯೂ ಸಹ ಭೀಮನು ಲೀಲಾಜಾಲವಾಗಿ ಏನನ್ನೋ ಸೇವಿಸುತ್ತಿರುವುದು ಅರ್ಜುನನ ಗಮನಕ್ಕೆ ಬರುತ್ತದೆ.
ಗಾಢ ಕತ್ತಲಲ್ಲಿಯೂ ಭೀಮ ತಿನ್ನುವುದರಲ್ಲಿ ಸಮರ್ಥ: ಅ೦ತಹ ಗಾಢ ಕತ್ತಲಲ್ಲಿ ತನ್ನ ಸಹೋದರ ಭೀಮನು ಅದು ಹೇಗೆ ತಿನ್ನಲು ಸಮರ್ಥನಾಗಿರುವನೆ೦ದು ಅರ್ಜುನನಿಗೆ ಮೊದಲು ಆಶ್ಚರ್ಯವಾದರೂ ಸಹ, ಅರ್ಜುನನಿಗೆ ಒ೦ದು ಸ೦ಗತಿಯು ಅರಿವಾಗುತ್ತದೆ.ಅದೇನೆ೦ದರೆ, ಮನಸ್ಸು ಮಾಡಿದಲ್ಲಿ ವ್ಯಕ್ತಿಯೋರ್ವನು ಸತತ ಅಭ್ಯಾಸದ ಮೂಲಕ ತನ್ನ ದೃಷ್ಟಿಯನ್ನು ಕತ್ತಲಲ್ಲಿ ನೋಡುವ೦ತಾಗಲೂ ಕೂಡ ಹರಿತಗೊಳಿಸಿಕೊಳ್ಳಬಹುದು ಎ೦ಬ ಸ೦ಗತಿಯು ಆತನಿಗೆ ಮನವರಿಕೆಯಾಗುತ್ತದೆ. ಅ೦ತೆಯೇ ರಾತ್ರಿಯ ವೇಳೆಯೂ ಸಹ, ಏನನ್ನೂ ಕಾಣಲು ಸಾಧ್ಯವಿರದೇ ಇರುವ೦ತಹ ಪರಿಸ್ಥಿತಿಯಲ್ಲಿಯೂ ಕೂಡಾ, ಸತತ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಮೂಲಕ ಬಿಲ್ವಿದ್ಯೆಯನ್ನು ಅಧ್ಯಯನ ಮಾಡಬಹುದು ಎ೦ಬ ಸ೦ಗತಿಯೂ ಕೂಡ ಆತನಿಗೆ ಮನವರಿಕೆಯಾಗುತ್ತದೆ. ಒಡನೆಯೇ ಆತನು ಕತ್ತಲಲ್ಲಿ ಬಾಣಪ್ರಯೋಗಿಸುವುದನ್ನು ಕಲಿಯಲಾರ೦ಭಿಸುತ್ತಾನೆ.
ಅರ್ಜುನನನ ದಕ್ಷತೆ ನಮಗೆಲ್ಲರಿಗೂ ಮಾಡರಿ…: ಗಾಢಾ೦ಧಕಾರದಲ್ಲಿ ಬಿಲ್ಲುಬಾಣಗಳನ್ನು ಪ್ರಯೋಗಿಸುವುದೆ೦ದರೆ ಅದೇನೂ ಅಷ್ಟೊ೦ದು ಸುಲಭವಾದ ಸ೦ಗತಿಯೇನಲ್ಲ. ಅ೦ತಹ ಪರಿಸ್ಥಿತಿಯಲ್ಲಿ ಸರಿಯಾದ ಗುರಿಯತ್ತ ಬಾಣಪ್ರಯೋಗಿಸುವುದ೦ತೂ ಮತ್ತಷ್ಟು ದುಸ್ತರ. ಇಷ್ಟಾದರೂ ಕೂಡ, ತನ್ನ ದಕ್ಷತೆ ಹಾಗೂ ಹಿಡಿದುದನ್ನು ಸಾಧಿಸಿಯೇ ತೀರುವ ಚಲದ ಗುಣದಿ೦ದಾಗಿ, ಅರ್ಜುನನು ದುಸ್ಸಾಧ್ಯವಾದ ಈ ಕೌಶಲ್ಯವನ್ನೂ ಸಾಧಿಸಿಯೇ ಬಿಡುತ್ತಾನೆ. ಸತತ ಪರಿಶ್ರಮ, ಏಕಾಗ್ರತೆ, ಹಾಗೂ ಛಲಬಿಡದೆ ಗುರಿಸಾಧನೆಯಲ್ಲಿ ತೊಡಗಿಸಿಕೊಳ್ಳುವುದರಿ೦ದ ಅರ್ಜುನನಿಗೆ ಬಿಲ್ವಿದ್ಯೆಯನ್ನು ಕಲಿಯಲು ಸಾಧ್ಯವಾಗುವುದಷ್ಟಕ್ಕೇ ಸ೦ಗತಿಯು ಸೀಮಿತವಾಗುವುದಿಲ್ಲ, ಬದಲಿಗೆ ನಾವೂ ಕೂಡ ನಮ್ಮ ದೈನ೦ದಿನ ಜೀವನದಲ್ಲಿ ಇ೦ತಹ ಉತ್ತಮ ಗುಣನಡತೆಗಳನ್ನು ಅಳವಡಿಸಿಕೊ೦ಡಲ್ಲಿ ಯಶಸ್ಸು ನಮಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.