RAMANATHAPURA

ಅರಕಲಗೂಡು ತಾಲ್ಲೂಕಿನ ರಾಮನಾಥಪುರ

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿದೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ. ಇದು ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ನೂರಾರು ದೇವರುಗಳ ಸಂಗಮ, ನಿತ್ಯ ನೂರಾರು ಭಕ್ತರು ಬಂದು ಕಾವೇರಿ ನದಿಯಲ್ಲಿ ಮಿಂದು ಪುನೀತರಾಗುವ ಪವಿತ್ರ ಸ್ಥಳ.

ತ್ರೇತಾಯಗದಲ್ಲಿ ವಾಸವಪುರಿ ಎಂಬ ಹೆಸರಿದ್ದ ಈ ಕ್ಷೇತ್ರದಲ್ಲಿ ಶ್ರಿ ರಾಮೇಶ್ವರ, ಶ್ರೀ ಅಗಸ್ತ್ಯೇಶ್ವರ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ, ಶ್ರಿ ಪಟ್ಟಾಭಿರಾಮ, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸೇರಿದಂತೆ ನೂರಾರು ದೇವರ ಸನ್ನಿಧಿಯನ್ನು ಕಾಣಬಹುದು.

17ನೇ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶ್ರಿ ಸುಬ್ರಹ್ಮಣ್ಯ ಮಠದ ಗುರುಪರಂಪರೆಯಲ್ಲಿ 14 ನೆಯವರಾದ ವಿಬುದೇಶತೀರ್ಥ ಶ್ರಿಗಳು ಯಾತ್ರಾರ್ಥವಾಗಿ ಹೊರಟು ರಾಮನಾಥಪುರಕ್ಕೆ ಬಂದು ನಿಲ್ಲುತ್ತಾರೆ. ಒಮ್ಮೆ ಅವರ ಕನಸಿನಲ್ಲಿ ಶ್ರಿ ಸುಬ್ರಹ್ಮಣ್ಯ ಸ್ವಾಮಿಯು ಪ್ರತ್ಯಕ್ಷವಾಗಿ `ನನ್ನನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸು~ ಎಂದು ಹೇಳಿ ಅಂತರ್ಧಾನನಾದ. ಅಂದೇ ಹೊಳೆನರಸಿಪುರದ ರಾಜ ನರಸಪ್ಪ ನಾಯಕನಿಗೂ ಸ್ವಾಮಿ ಕನಸಿನಲ್ಲಿ ಬಂದು `ಶ್ರೀಗಳನ್ನು ಭೇಟಿ ಆಗಿ ಅವರ ಇಚ್ಛೆಯಂತೆ ನಡೆದುಕೊ~ ಎಂದು ಹೇಳಿದಂತಾಗುತ್ತದೆ. ಮರುದಿನವೇ ರಾಜ ಶ್ರೀಗಳನ್ನು ಭೇಟಿ ಮಾಡುತ್ತಾನೆ. ಗುರುಗಳು ಈ ಕ್ಷೇತ್ರದ್ಲ್ಲಲಿ ಶ್ರಿ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಿರ್ಮಿಸುವಂತೆ ಸಲಹೆ ಮಾಡುತ್ತಾರೆ. ಅದೇ ಈಗಿನ ರಾಮನಾಥಪುರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ.

ಪ್ರತಿ ವರ್ಷ ಮಾರ್ಗಶಿರ ಶುದ್ಧ ಚಂಪಾ ಷಷ್ಠಿ ದಿವಸ ಇಲ್ಲಿ ಒಂದು ತಿಂಗಳ ಜಾತ್ರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ನಾಡಿನ ನಾನಾ ಭಾಗದಿಂದ ಅಸಂಖ್ಯಾತ ಭಕ್ತರು ಬಂದು ಭಕ್ತಿ, ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಕ್ಷೇತ್ರ ಮಹಾತ್ಮೆ: ತ್ರೇತಾಯುಗದಲ್ಲಿ ಲಂಕಾಧಿಪತಿ ರಾವಣನನ್ನು ಲೋಕೋದ್ಧಾರಕ್ಕಾಗಿ ಸಂಹರಿಸಿದ ಶ್ರಿ ರಾಮನು ಇಕ್ಷಾಕು ವಂಶದ ಪೂಜ್ಯ ಗುರುಗಳಾದ ಬ್ರಹ್ಮಪುತ್ರ ವಸಿಷ್ಠರ ಪ್ರೇರಣೆಯಿಂದಾಗಿ ತನ್ನ ಸಕಲ ಪರಿವಾರದೊಂದಿಗೆ ಪುಷ್ಪಕ ವಿಮಾನದಲ್ಲಿ ವಾಸವಪುರಕ್ಕೆ (ರಾಮನಾಥಪುರ) ಬಂದಿಳಿಯುತ್ತಾನೆ. ಗುರುಗಳ ಅಪ್ಪಣೆಯಂತೆ ಕ್ಷೇತ್ರದಲ್ಲಿ ಒಂದು ಶಿವಲಿಂಗವನ್ನು ಪ್ರತಿಪ್ಠಾಪಿಸಲು ಮುಂದಾಗುತ್ತಾನೆ. ತನ್ನ ಪರಮಭಕ್ತ ಹನುಮಂತನಿಗೆ ಒಂದು ಶಿವಲಿಂಗವನ್ನು ತರಲು ಆಜ್ಞಾಪಿಸುತ್ತಾನೆ.

ಆಂಜನೇಯ ಆಚೆ ಹೋಗುತ್ತಿದ್ದಂತೆ ಶ್ರೀರಾಮನಿಗೆ ಪುಷ್ಕರಣಿಯ ಬಳಿ ಪೊದೆ ಹಾಗೂ ಹುತ್ತಗಳಿಂದ ಆವೃತ್ತವಾಗಿರುವ ಸ್ವಯಂಭೂ ಲಿಂಗ ಗೋಚರಿಸುತ್ತದೆ. ಅದಕ್ಕೇ ಪೂಜೆ ಸಲ್ಲಿಸುತ್ತಾನೆ. ಹೀಗಾಗಿಯೇ ಇದು ಶ್ರೀ ರಾಮೇಶ್ವರ ಕ್ಷೇತ್ರ.

ಇತ್ತ ಶ್ರಿರಾಮನ ಅಪ್ಪಣೆಯಂತೆ ಹೋಗಿದ್ದ ಹನುಮಂತ ಗಂಡಕೀ ಕ್ಷೇತ್ರದಿಂದ ಲಿಂಗವನ್ನು ತರುತ್ತಾನೆ. ಆದರೆ ಆ ವೇಳೆಗೆ ಶ್ರಿರಾಮ ಇನ್ನೊಂದು ಲಿಂಗ ಪೂಜಿಸುತ್ತಿರುವುದನ್ನು ಕಂಡು ಅಸಮಾಧಾನಗೊಳ್ಳುತ್ತಾನೆ. ಇದನ್ನು ಅರಿತ ರಾಮಚಂದ್ರ ಭಕ್ತ ಹನುಮಂತನಿಗೆ `ನೀನು ತಂದ ಈ ಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸು. ಅದಕ್ಕೆ ಹನುಮಂತೇಶ್ವರ ಎಂಬ ಹೆಸರು ಪ್ರಾಪ್ತವಾಗಲಿ. ಭಕ್ತಾದಿಗಳು ರಾಮೇಶ್ವರನ ದರುಶನಕ್ಕಿಂತ ಮುನ್ನ ಹನುಮಂತೇಶ್ವರನ ದರ್ಶನ ಮಾಡಲಿ. ಇಲ್ಲದಿದ್ದರೆ ರಾಮೇಶ್ವರನ ದರ್ಶನದಿಂದ ಉಂಟಾದ ಫಲ ಲಭಿಸದೇ ಹೋಗಲಿ~ ಎಂದು ಹೇಳುತ್ತಾನೆ. ಅಲ್ಲದೆ ಇದೇ ಕ್ಷೇತ್ರದಲ್ಲಿ ಲಕ್ಷ್ಮಣನು ತಂದ ಲಿಂಗಕ್ಕೆ ಲಕ್ಷ್ಮಣೇಶ್ವರ, ನೆಚ್ಚಿನ ಬಂಟ ಅಂಗದನು ತಂದ ಲಿಂಗಕ್ಕೆ ಅಂಗದೇಶ್ವರ ಎಂದು ಕರೆಯುತ್ತಾನೆ ಎನ್ನುತ್ತದೆ ಸ್ಥಳ ಮಹಾತ್ಮೆ.

ಗತಕಾಲದಲ್ಲಿ ಭೃಗು ಮಹರ್ಷಿಗಳಿಂದ ಶಾಪಗ್ರಸ್ತನಾದ ಅಗ್ನಿಯೂ ಈ ಕ್ಷೇತ್ರಕ್ಕೆ ಬಂದು ಶಿವಲಿಂಗವನ್ನು ಅರ್ಚಿಸುತ್ತಾ ತಪಸ್ಸು ಮಾಡುತ್ತಾನೆ. ಅವನ ತಪೋ ಮಹಿಮೆಯಿಂದಾಗಿ ಜ್ವಾಲೆಯು ಸುತ್ತ ಲೋಕವನ್ನು ಸುಡಲಾರಂಭಿಸಿದಾಗ ಭಯಗೊಂಡ ಇಂದ್ರಾದಿ ದೇವತೆಗಳು ಕೈಲಾಸಕ್ಕೆ ಹೋಗುತ್ತಾರೆ. ಅಗ್ನಿಗೆ ದರ್ಶನ ನೀಡಿ ಬೇಡಿಕೆ ಈಡೇರಿಸಿ ಸಂತೈಸಲು ಮೊರೆಯಿಡುತ್ತಾರೆ. ಆಗ ಪರಶಿವ ಲಿಂಗದಲ್ಲಿ ಪ್ರತ್ಯಕ್ಷನಾಗಿ ದರ್ಶನ ನೀಡುತ್ತಾನೆ. ನಾನು ಅನುಗಾಲ ಇಲ್ಲೇ ನೆಲೆಸುತ್ತೇನೆ. ಇಲ್ಲಿನ ಪುಷ್ಕರಣಿಯಲ್ಲಿ ಮಿಂದು ನನ್ನನ್ನು ಆರಾಧಿಸಿದವರಿಗೆ ಸಕಲ ಪಾಪಗಳೆಲ್ಲಾ ಕಳೆದು ಪುಣ್ಯ ಪ್ರಾಪ್ತಿಯಾಗಲಿ. ಈ ಪುಷ್ಕರಣಿ ಇನ್ನು ವಹ್ಕಿ ಪುಷ್ಕರಣಿ ಎಂದು ಪ್ರಸಿದ್ಧವಾಗಲಿ, ಮುಂದೆ ಅಗಸ್ತ ಮಹರ್ಷಿಗಳ ಸತಿಯಾದ ಕಾವೇರಿ ಇಲ್ಲಿ ನದಿಯಾಗಿ ಹರಿಯುತ್ತಾಳೆ. ವಹ್ನಿ ಪುಷ್ಕರಣಿ ಸಹಿತಳಾದ ಕಾವೇರಿ ದಕ್ಷಿಣೋತ್ತರಗಳಲ್ಲಿರುವ ಸರ್ವನದಿಗಳಿಗೂ ಶ್ರೇಷ್ಠಳಾಗಲಿ ಎಂದು ವರ ನೀಡುತ್ತಾನೆ.

ಕಾವೇರಿ ನದಿಗುಂಟ ಒಟ್ಟೂ ಮೂರು ಪುಷ್ಕರಣಿಗಳಿವೆ. ಅದರಲ್ಲಿ ರಾಮನಾಥಪುರದ್ದು ವಹ್ಕಿ ಪುಷ್ಕರಣಿ. ಕೃಷ್ಣರಾಜನಗರದ ಬಳಿ ಅರ್ಕ ಪುಷ್ಕರಣಿ ಮತ್ತು ತಮಿಳುನಾಡಿನ ಶ್ರಿರಂಗದಲ್ಲಿ ಇರುವುದೇ ಚಂದ್ರ ಪುಷ್ಕರಣಿ.

ಈ ಕ್ಷೇತ್ರದಲ್ಲಿ ಹೊಯ್ಸಳ ವಾಸ್ತುಶಿಲ್ಪ ಕಾಣಬಹುದು. ಇಲ್ಲಿ ಹೊಯ್ಸಳರ ಕಾಲದ ವೇಣುಗೋಪಾಲ ಸ್ವಾಮಿಯ ವಿಗ್ರಹವಿದೆ. ಶ್ರಿರಾಮೇಶ್ವರನ ದೇವಾಲಯವನ್ನು ಹೊಯ್ಸಳರ ಅರಸ 3ನೇ ನರಸಿಂಹ 1253 ರಿಂದ 1292 ರಲ್ಲಿ ನಿರ್ಮಿಸಿದ. ದೇವಾಲಯ ಮತ್ತು ಗರ್ಭಗುಡಿಗೆ ಬಳಪದ ಕಲ್ಲು ಬಳಸಲಾಗಿದೆ. 9 ಅಂಕಣದ ಸ್ತಂಭಗಳಿವೆ. ಮುಂದೆ ಸೋಮದಂಡನಾಯಕ ಹೊಯ್ಸಳ ಶಿಖರದ ಮುಂದೆ ಸಳ- ವ್ಯಾಗ್ರಗಳ (ಹೊಯ್ಸಳರ ಮೂಲ ಪುರುಷ ಸಳನು ಹುಲಿಯನ್ನು ಕೊಲ್ಲುತ್ತಿರುವ) ಲಾಂಛನ ಅಳವಡಿಸಿದ.

ವಿಜಯನಗರ ಅರಸರು ಮತ್ತು ಪಾಳೆಗಾರರ ಆಳ್ವಿಕೆಯಲ್ಲಿ ದೇವಸ್ಥಾನದ ಆವರಣ ಮಂಟಪಗಳನ್ನು ನಿರ್ಮಿಸಲಾಯಿತು.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 2.99 ( 5 votes)

ಇವುಗಳೂ ನಿಮಗಿಷ್ಟವಾಗಬಹುದು

ಹೊಯ್ಸಳ ವಾಸ್ತುಶಿಲ್ಪ

ಹೊಯ್ಸಳ ವಾಸ್ತುಶಿಲ್ಪ

ಕರ್ನಾಟಕವನ್ನು ಬಹುಕಾಲದವರೆವಿಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ …

Leave a Reply

Your email address will not be published. Required fields are marked *