Wednesday , 24 April 2024
yakshagaana

ಅಪರೂಪವಾಗುತ್ತಿದೆ ಯಕ್ಷಗಾನದಲ್ಲಿ ತಟ್ಟಿ ವೀರಭದ್ರ ಪಾತ್ರ

ಅವಿನಾಶ್‌ ಬೈಪಾಡಿತ್ತಾಯ: ಬಡಾಬಡಗು ತಿಟ್ಟಿನಲ್ಲಿ ಕಂಡು ಬರುವ ಮತ್ತು ಅಪರೂಪವಾಗಿರುವ ತಟ್ಟಿ ವೀರಭದ್ರ ವೇಷ ಮತ್ತೆ ಈಗ ಪಾಪ್ಯುಲರ್‌ ಆಗುತ್ತಿದೆ. ರಂಗದಲ್ಲಿ ಕೆಲವೇ ಹೊತ್ತು ರಾರಾಜಿಸಿ, ಅಚ್ಚಳಿಯದ ದೈವಿಲೋಕವನ್ನೇ ಸೃಷ್ಟಿಸಬಲ್ಲ ಮತ್ತು ರೌದ್ರದಿಂದಲೇ ರಮಣೀಯತೆಯನ್ನು ಸೃಜಿಸಬಲ್ಲ ಪಾತ್ರ ಇದಾಗಿದೆ.

ತಟ್ಟಿ ವೀರಭದ್ರನ ಅಬ್ಬರದ ಪ್ರವೇಶ, ಆರ್ಭಟದೊಂದಿಗೆ ಸಭೆಯ ಮಧ್ಯೆಯೇ ನಡೆದು ಬರುವ ದೃಶ್ಯ, ದೊಂದಿ ಬೀಸುತ್ತಾ ರಂಗಸ್ಥಳ ಪ್ರವೇಶಿಸುವ ವೈಖರಿ, ವೀರ ರಸದ ಪದ್ಯಗಳಿಂದೊಡಗೂಡಿದ ಹಿಮ್ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಇಡೀ ರಂಗಸ್ಥಳವನ್ನು ಆವರಿಸುವ ದೃಶ್ಯ ಕಣ್ಮನ ಸೆಳೆಯತ್ತದೆ. ಇಷ್ಟೆಲ್ಲ ರಂಗವೈಭವವನ್ನು ನೋಡಿ ಪ್ರೇಕ್ಷ ಕರು ಅದೆಷ್ಟು ಮನರಂಜನೆ ಪಡೆಯುತ್ತಾರೆಂಬುದು ಎಷ್ಟು ದಿಟವೋ, ಅದರ ಹಿಂದೆ ಕಲಾವಿದನೊಬ್ಬನ ಪರಿಶ್ರಮವಿರುತ್ತದೆ ಎಂಬುದನ್ನು ಯೋಚಿಸುವ ಗೋಜಿಗೆ ಹೋಗುವವರು ಕಡಿಮೆ ಎಂಬುದೂ ಅಷ್ಟೇ ಸತ್ಯ. ಈ ಪಾತ್ರದ ತಯಾರಿಗೆ ಬೇಕಾಗುವ ಸಾಮಗ್ರಿಗಳು, ಸಮಯ ಹಾಗೂ ಕುಶಲಿಗರ ಅಭಾವದಿಂದಾಗಿಯೇ ಯಕ್ಷ ಗಾನದಲ್ಲಿ ಇದೊಂದು ಮರೆಯಾಗುತ್ತಿರುವ ಪಾತ್ರವಾಗಿ ಆತಂಕ ಹುಟ್ಟಿಸುತ್ತದೆ.

ರಾಜ್ಯ-ದೇಶದ ಗಡಿ ಮೀರಿ ಗಮನ ಸೆಳೆಯುತ್ತಿರುವ ಯಕ್ಷ ಗಾನ ಕಲೆಯಲ್ಲಿ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ವಿಶೇಷತೆಯಿದೆ. ನೀರವ ರಾತ್ರಿಯಲ್ಲಿ ದೇವಾನುದೇವತೆಗಳು, ದೈತ್ಯರಿಂದೊಡಗೂಡಿದ ಬೇರೆಯೇ ಲೋಕವನ್ನು ಚಿತ್ರಿಸಲು ಕಲಾವಿದರು ಅಪಾರ ಪರಿಶ್ರಮ ಪಡುತ್ತಾರೆ. ಪಾರಂಪರಿಕ ಯಕ್ಷ ಗಾನದಲ್ಲಿ ರೌದ್ರ ರಸಭರಿತವಾದ ರಾಕ್ಷ ಸ ವೇಷಗಳ ವೈಶಿಷ್ಟ್ಯವೇ ಬೇರೆ. ಇಡೀ ರಾತ್ರಿ ನಡೆಯುವ ಕಲಾ ಪ್ರದರ್ಶನವೊಂದರಲ್ಲಿ ದೈತ್ಯ ವೇಷಗಳು ರಂಗದಲ್ಲಿ ವಿಜೃಂಭಿಸುವುದು ಕೆಲವೇ ನಿಮಿಷಗಳಾದರೂ, ವೇಷದ ರಚನೆಗೆ ತೆಗೆದುಕೊಳ್ಳುವ ಸಮಯ ಮತ್ತು ಅವರ ವ್ಯವಧಾನಕ್ಕೆ ಸಾಟಿಯೇ ಇಲ್ಲ.

ವೀರಭದ್ರನ ಉದ್ಭವ

ಪೌರಾಣಿಕ ಕಥಾನಕದ ದಕ್ಷಾಧ್ವರ ಪ್ರಸಂಗದಲ್ಲಿ ವೀರಭದ್ರನ ಉದ್ಭವ ಆಗುತ್ತದೆ. ಬ್ರಹ್ಮನು ತಾನು ಬಂದಾಗ ಜ್ಞಾನ ಸತ್ರದ ಅಧ್ಯಕ್ಷ ಸ್ಥಾನದಲ್ಲಿದ್ದ ಈಶ್ವರನು ಎದ್ದು ನಿಲ್ಲದೆ ಅವಮಾನಿಸಿದನೆಂಬ ದ್ವೇಷದಿಂದಾಗಿ, ಈಶಾನ್ಯ ಭಾಗಕ್ಕೆ ಹವಿಸ್ಸನ್ನು ನೀಡದೆ, ಪುತ್ರಿ ದಾಕ್ಷಾಯಿಣಿಯ ಪತಿಯಾದ ಪರಮೇಶ್ವರನಿಗೆ ಆಹ್ವಾನ ನೀಡದೆ, ನಿರೀಶ್ವರ ಯಜ್ಞವನ್ನು ಕೈಗೊಳ್ಳುತ್ತಾನೆ. ಆಮಂತ್ರಣವಿಲ್ಲದೆ ತವರಿಗೆ ಹೋಗಬಾರದೆಂದು ಶಿವನು ಎಚ್ಚರಿಸಿದರೂ, ತವರೂರಾದ ಪ್ರಾಚೀನಬರಿಹಿಗೆ ತೆರಳುವ ದಾಕ್ಷಾಯಿಣಿಯು, ಅಲ್ಲಿ ತನ್ನ ಆಗಮನವನ್ನು ಕಡೆಗಣಿಸಿದ ತಂದೆ, ತಾಯಿ ಬಂಧುಗಳಿಂದ ತನಗೆ ಹಾಗೂ ತನ್ನ ಪತಿಗೆ ಆದ ಅವಮಾನ ಸಹಿಸಲಾರದೆ, ಮರಳಿ ಕೈಲಾಸಕ್ಕೂ ಹೋಗಲಾರದೆ ಆತ್ಮಶಕ್ತಿಯಿಂದಲೇ ಅಗ್ನಿಯನ್ನು ಸೃಷ್ಟಿಸಿಕೊಂಡು ತನ್ನನ್ನು ತಾನು ಆಹುತಿ ಮಾಡಿಕೊಳ್ಳುತ್ತಾಳೆ. ಸತಿಯು ದಹನವಾದುದನ್ನರಿತ ಶಿವನು ರೌದ್ರ ರೂಪ ತಾಳಿ, ತಾಂಡವ ನೃತ್ಯವಾಡುತ್ತಾ, ತನ್ನ ಜಟೆಯನ್ನು ನೆಲಕ್ಕೆ ಬಡಿಯಲಾಗಿ, ಅಲ್ಲಿ ಉದ್ಭವಗೊಳ್ಳುವ ರೌದ್ರ ಶಕ್ತಿಯೇ ವೀರಭದ್ರ. ಅವನು ಕೊನೆಗೆ ಶಿವನ ಆಜ್ಞೆಯಂತೆ ದಕ್ಷ ನ ಶಿರ ಕಡಿಯುವುದು ಕಥೆಯ ತಿರುಳು.

ವೀರಭದ್ರನ ಪಾತ್ರ ಭಯಾನಕ ಹಾಗೂ ರೌದ್ರ ರಸಗಳ ಸಮ್ಮಿಲನ. ರಾಕ್ಷ ಸ ವೇಷಗಳ ಬಣ್ಣಗಾರಿಕೆಗೆ ಮೂರ್ನಾಲ್ಕು ಗಂಟೆಗಳೇ ಬೇಕಾಗುತ್ತವೆ. ಅಕ್ಕಿಯ ಹಿಟ್ಟಿನಲ್ಲಿ ಮುಖಕ್ಕೆ ಚಿಟ್ಟಿ ಇಡುವುದೊಂದು ಕಲೆಗಾರಿಕೆ. ಅದೇ ರೀತಿ, ಹಿಂಭಾಗದಲ್ಲಿ ಕಟ್ಟಿಕೊಳ್ಳುವ ತಟ್ಟಿ ರಚಿಸುವುದು ಬಿದಿರು ಅಥವಾ ಬೆತ್ತದ ಕಡ್ಡಿಗಳಿಂದ. ಇದರಲ್ಲಿ 32 ಉದ್ದನೆಯ ಕಡ್ಡಿಗಳಿರುತ್ತವೆ, ಪ್ರತಿಯೊಂದರ ತುದಿಯಲ್ಲಿ ಒಂದೊಂದು ದೊಂದಿ. ಈ ತಟ್ಟಿಗೆ ಹೂವು, ಅಡಿಕೆಯ ಸಿಂಗಾರ ಸೇರಿದಂತೆ ಸಾಕಷ್ಟು ಅಲಂಕಾರವನ್ನೂ ಮಾಡಲಾಗಿರುತ್ತದೆ. ಭಾರವಾಗಿರುವ ಇದನ್ನು ಹೊತ್ತುಕೊಂಡು ರಂಗದಲ್ಲಿ ಕುಣಿಯಲೂ ಅಳ್ಳೆದೆ ಬೇಕು. ಸಾಮಾನ್ಯವಾಗಿ ಯಾವುದೇ ರಾಕ್ಷ ಸ ವೇಷಗಳ ಪ್ರವೇಶ ಹಾಗೂ ಸಂಹಾರದ ಸಂದರ್ಭದಲ್ಲಿ ಕಲಾಸಕ್ತರ ನಂಬಿಕೆಯಂತೆ ಆವೇಶ ಬರುವ ಸಾಧ್ಯತೆಯಿರುವುದರಿಂದ ತೆಂಗಿನಕಾಯಿಯನ್ನೋ, ಕುಂಬಳಕಾಯಿಯನ್ನೋ ಒಡೆಯುವ ಸಂಪ್ರದಾಯವೂ ಇದೆ. ಇದು ಪಾತ್ರ ಚಿತ್ರಣಕ್ಕೆ ಮತ್ತಷ್ಟು ಭಯ ಭಕ್ತಿಯ ಪೋಷಣೆಯನ್ನು ನೀಡುತ್ತದೆ.

ತಟ್ಟಿಯಲ್ಲಿರುವ ದೊಂದಿಗಳಿಂದಾಗಿ ಬೆಂಕಿಯು ವೇಷಭೂಷಣಕ್ಕೆ, ಕೃತಕ ಕೂದಲಿಗೆ ತಗುಲದಂತೆ ಎಚ್ಚರಿಕೆಯ ಹೆಜ್ಜೆಯಿಂದಲೇ ರಂಗದಲ್ಲಿ ಕುಣಿಯಬೇಕಾಗುತ್ತದೆ. ಇದಕ್ಕಾಗಿಯೇ ದೊಂದಿಗೆ ಬಾಳೆ ಎಲೆಯ ದಡಿ ಸುತ್ತಲಾಗುತ್ತದೆ. ಇಂಥ ತಟ್ಟಿಯನ್ನು ಕಟ್ಟಿಕೊಂಡು ರಂಗದಲ್ಲಿ ವಿಜೃಂಭಿಸುವುದು ಅಪಾಯಕಾರಿಯೇ. ಸಭೆಯ ಮಧ್ಯೆಯೇ ಅಟ್ಟಹಾಸದೊಂದಿಗೆ ಆಗಮಿಸಿ, ರಂಗಸ್ಥಳ ಪ್ರವೇಶಿಸಿ, ಹಸಿವು ನಿವಾರಿಸಿಕೊಳ್ಳಲು ಬಾರಣೆಯ ಪಾರಂಪರಿಕ ಕ್ರಮ ಮೈಮನವನ್ನು ಜುಮ್ಮೆನ್ನಿಸುತ್ತದೆ. ಇದರ ಹಿಂದಿರುವ ಸೂಕ್ಷ ್ಮಗಳು ಪ್ರೇಕ್ಷ ಕರ ಅರಿವಿಗೆ ಬಾರದಿದ್ದರೂ, ರಂಗದಲ್ಲಿ ವೀರಭದ್ರನ ಪಾತ್ರವಂತೂ ವಿಜೃಂಭಿಸಿಬಿಡುತ್ತದೆ.

ಇಂಥದ್ದೊಂದು ವೇಷವು ರಂಗದಿಂದ ಮರೆಯಾಗುವ ಹಂತದಲ್ಲಿದೆ. ಬಹುಶಃ 40-50ರ ದಶಕದಲ್ಲಷ್ಟೇ ಇದು ಕಾಣಸಿಕ್ಕಿತ್ತೇನೋ. ಈ ಪಾರಂಪರಿಕ ತಟ್ಟಿ ವೀರಭದ್ರನನ್ನು ಇತ್ತೀಚೆಗೆ ಬೆಂಗಳೂರಿನ ಪ್ರಯೋಗವೊಂದರಲ್ಲಿ ರಂಗದಲ್ಲಿ ಬಿಂಬಿಸಿದ್ದಾರೆ ಹೋಮಿಯೋಪತಿ ವೈದ್ಯರೂ, ಪ್ರಾಧ್ಯಾಪಕರೂ ಆಗಿರುವ ಡಾ.ಶ್ರೀಪಾದ ಹೆಗಡೆ. ಸಾಗರ ಸಿದ್ದಾಪುರದ ಹುಕ್ಲಮಟ್ಟಿ ಸಿದ್ಧಿವಿನಾಯಕ ಮಿತ್ರ ಮಂಡಳಿ ಮೇಳದ ವಿಶಿಷ್ಟ ಪಾತ್ರನಿರೂಪಣೆಯೊಂದಿಗಿರುವ ಈ ಪಾತ್ರವನ್ನು ಅವರು ಮೂರು ಬಾರಿ ವಿವಿಧೆಡೆ ನಿರ್ವಹಿಸಿದ್ದಾರೆ. ತಂದೆ, ಹಿರಿಯ ಕಲಾವಿದ ಮಂಜುನಾಥ ಹೆಗಡೆಯವರಿಂದಲೇ ಹೆಜ್ಜೆ, ಬಣ್ಣಗಾರಿಕೆಯನ್ನು ಕಲಿತು ಇದರ ಪರಂಪರೆಯ ಸೊಗಡನ್ನು ನಗರವಾಸಿಗಳಿಗೆ ಉಣಬಡಿಸಿದ್ದಾರೆ ಡಾ.ಹೆಗಡೆ. ರಂಗದಲ್ಲಿ ಬೇರೆಯೇ ಲೋಕವನ್ನು ಸಾಕ್ಷಾತ್ಕರಿಸುವ ಪಾತ್ರಗಳಾದ, ವೀರಭದ್ರ, ಕಂಬದಿಂದೊಡೆದು ಬರುವ ಉಗ್ರ ನರಸಿಂಹ, ದಾಡೆಯಿಂದ ಭೂಮಿಯನ್ನೆತ್ತಿಕೊಂಡು ಬರುವ ಶ್ವೇತ ವರಾಹ, ಈಶ್ವರನೇ ಕಿರಾತನಾಗಿ ಬರುವ ಶಬರ… ಈ ಪಾತ್ರಗಳಲ್ಲಿ ಅವರದು ಎತ್ತಿದ ಕೈ. ರಂಗದಲ್ಲಿ ವೀರಭದ್ರನನ್ನು ಬಿಂಬಿಸಿದ ರೀತಿಯಂತೂ ಯಕ್ಷ ಗಾನ ಪ್ರಿಯರಿಂದ ಶಹಬ್ಬಾಸ್‌ ಗಿಟ್ಟಿಸಿದೆ.

ಅಪರೂಪದ ಪಾತ್ರಗಳಿಗೆ ಜೀವ ತುಂಬುತ್ತಿರುವ, ಬಸವೇಶ್ವರ ನಗರ ಸರಕಾರಿ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಹೆಗಡೆ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಶ್ಯಾಮಲಾ ಭಾವೆ ಪುರಸ್ಕಾರ, ರಂಗ ಪ್ರಪಂಚ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ಬೆಂಗಳೂರು ರಂಗಸಮುದ್ರ ಸಂಸ್ಥೆಯು ‘ಧನ್ವಂತರಿ-ಯಕ್ಷ ಶ್ರೇಷ್ಠ’ ಎಂದು ಗೌರವವನ್ನೂ ನೀಡಿದೆ.

ಯಕ್ಷ ಗಾನ ಸೇರಿದಂತೆ ಎಲ್ಲ ಕ್ಷೇತ್ರಗಳೂ ಬದಲಾವಣೆಗೆ ಒಳಪಟ್ಟಿವೆ. ಆದರೆ ಅದರ ಸೊಗಡು ಉಳಿಸಿಕೊಂಡು ಬದಲಾವಣೆಗೆ ಒಡ್ಡಿಕೊಳ್ಳುವುದು ಹಿರಿಯರ ಮತ್ತು ಕಲಾವಿದರ ಕರ್ತವ್ಯ. ವೃತ್ತಿಯ ಅವಿರತ ದುಡಿಮೆಯ ನಡುವೆ ಆತ್ಮಸಂತೋಷಕ್ಕಾಗಿ ಯಕ್ಷ ಗಾನ ನೆರವಾಗುತ್ತದೆ ಎಂದು ಡಾ.ಶ್ರೀಪಾದ ಹೆಗಡೆ ಹೇಳುತ್ತಾರೆ.

http://vijaykarnataka.indiatimes.com/home/culture/articlelist/14434280.cms

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *