Ajjampura G Suri

ಅಜ್ಜಂಪುರ ಜಿ. ಸೂರಿ

ಅಜ್ಜಂಪುರ ಜಿ. ಸೂರಿ (೧೭.೦೪.೧೯೩೯ – ೨೫.೦೫.೨೦೦೮): ಕವಿ, ವಚನಕಾರ, ಕಾದಂಬರಿಕಾರ, ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆ ಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ ೧೯೩೯ ರ ಏಪ್ರಿಲ್‌ ೧೭ ರಂದು. ಗೋವಿಂದಪ್ಪ, ತಾಯಿ ಪಾರ್ವತಮ್ಮ. ತಂದೆಯವರದು ಬಳೆಮಾರುವ ಕಾಯಕ ಪ್ರವೃತ್ತಿ ಆಯುರ್ವೇದ ಮತ್ತು ಅಧ್ಯಾತ್ಮ. ಲೌಕಿಕ ಚಿಕಿತ್ಸೆಗೆ ಆಯುರ್ವೇದ ಚಿಕಿತ್ಸೆ ನೀಡಿದರೆ ಪಾರಮಾರ್ಥಿಕಕ್ಕೆ ಅಧ್ಯಾತ್ಮ ಚಿಕಿತ್ಸೆ ನೀಡುತ್ತ ಗೋವಿಂದಾರ್ಯರೆನಿಸಿದ್ದರು.

ಈ ಪರಿಸರದಲ್ಲಿ ಬೆಳೆದ ಸೂರಿಯವರ ಮೇಲೂ ಆದ ಪರಿಣಾಮದಿಂದ ರೂಢಿಸಿಕೊಂಡ ಸುಸಂಸ್ಕೃತ ಬದುಕು. ಅಜ್ಜಂಪುರದಲ್ಲಿ ಪ್ರೌಢಶಾಲೆಯವರೆಗೆ. ನಂತರ ಕೃಷಿಕ್ಷೇತ್ರದಲ್ಲಿ ಪಡೆದ ಡಿಪ್ಲೊಮ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿ ಕ್ಷೇತ್ರಾಭಿವೃದ್ಧಿ ಅಧಿಕಾರಿಯವರೆಗೂ ವಿವಿಧ ಹಂತಗಳಲ್ಲಿ ಸೇವೆ.

ಬಾಲ್ಯದಿಂದಲೇ ಸಣ್ಣ ಕಥೆ, ಕಾದಂಬರಿ ಬರೆಯುವ ಹವ್ಯಾಸಕ್ಕೆ ಒಳಗಾಗಿ ಬರೆದದ್ದು ಹಲವಾರು ಕಾದಂಬರಿಗಳು. ಬಹುಪಾಲು ಕಾದಂಬರಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಶಾಪ, ಹೊಸಚಿಗುರು, ತೋಟದಮನೆ, ಎರಡು ಮನಸು, ಅನುಬಂಧ ಕಾದಂಬರಿಗಳು ಪ್ರಕಟವಾಗಿದ್ದರೆ ಗಿರಿವಾರ್ತೆ, ಮನ್ವಂತರ, ಅಭಿಮಾನಿ,ಗೆಳತಿ ಮುಂತಾದ ಪತ್ರಿಕೆಗಳಲ್ಲಿ ಮಾರ್ಗದರ್ಶಿ, ಶ್ವೇತಾಗ್ನಿ, ವಿಮುಕ್ತಿ, ನೇಗಿಲಗೆರೆ ಮುಂತಾದ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗಿವೆ.

ಬಾನುಲಿಗಾಗಿ ಬರೆದ ಹಲವಾರು ನಾಟಕಗಳು ಬೆಂಗಳೂರು ಭದ್ರಾವತಿ ನಿಲಯಗಳಿಂದ ಪ್ರಸಾರಗೊಂಡಿವೆ. ಅವುಗಳಲ್ಲಿ ಕೊನೆಯಾಸೆ, ಕುಳ್ಳರು, ಬೋನಿಗೆ ಬಿದ್ದ ಹುಲಿ, ಮರಗಡುಕ, ಪ್ರೇತಗಳು ಸುಮಂಗಲಿಯರು, ಧನ್ಯಭಿಕ್ಷು, ಒಂದೇ ಜನ ಒಂದೇ ಮನ ಹಲವಾರು ಬಾರಿ ಪ್ರಸಾರವಾಗಿದ್ದರೆ ‘ಪರಿವರ್ತನೆ’ ಮತ್ತು ‘ಅಂತರ’ ರಂಗನಾಟಕಗಳು ಸ್ಪರ್ಧೆಗಳಲ್ಲಿ ಪ್ರದರ್ಶಿತವಾಗಿ ಹಲವಾರು ಬಹುಮಾನಗಳನ್ನೂ ಪಡೆದಿವೆ.

ತೆಲುಗು ಸಾಹಿತ್ಯವನ್ನೂ ಬಾಲ್ಯದಿಂದಲೇ ಓದುತ್ತಾ ಬಂದಿದ್ದು, ಕನ್ನಡಕ್ಕೆ ಏಕೆ ಅನುವಾದಿಸಬಾರವೆನ್ನಿಸಿ ಹಲವಾರು ತೆಲುಗು ಕಾದಂಬರಿಗಳನ್ನು ಅನುವಾದಿಸಿದರು. ಅವುಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಸ್ಕರಣ, ಸೀತೆಯ ಕತೆಯಲ್ಲಿ ಸ್ತ್ರೀಪಾತ್ರಗಳು ಧಾರಾವಾಹಿಯಾಗಿ ಪ್ರಕಟವಾಗಿದ್ದಾರೆ, ತರಂಗ ವಾರ ಪತ್ರಿಕೆಯಲ್ಲಿ ಮನ್ಮಥರೇಖೆ, ಷಾಂಗ್ರೀಲಾ, ಲೇಡೀಸ್‌ ಹಾಸ್ಟೆಲ್‌, ಅರಣ್ಯ ಮೃದಂಗ, ಜ್ವಾಲಾಮುಖಿ, ಭೂಮಿ ಬಾಯ್ಬಿಟ್ಟಾಗ, ಕ್ರಿಕೆಟ್‌-ಕ್ರಿಕೆಟ್‌ ಕಾದಂಬರಿಗಳು; ಸುಧಾ, ಮಯೂರ ಪತ್ರಿಕೆಗಳಲ್ಲಿ ವೂಡು, ಕಾಲರುದ್ರ, ಒಬ್ಬ ಸೂರ್ಯ ಕಾದಂಬರಿಗಳು, ವಾರಪತ್ರಿಕೆಯಲ್ಲಿ (ವೈಕುಂಠರಾಜುಪತ್ರಿಕೆ) ಕರ್ಮಸಾಕ್ಷಿ, ಕಿನ್ನರಸಾನಿ, ಹಿಮಜ್ವಾಲೆ, ಅನ್ವೇಷಿ ಕಾದಂಬರಿಗಳು; ಈ ಪತ್ರಿಕೆಗಳೇ ಅಲ್ಲದೆ ಪ್ರಜಾಮತ, ಅಭಿಮಾನಿ, ಲೋಕವಾಣಿ, ಮಂಗಳಾ, ಕರ್ಮವೀರ ಮುಂತಾದ ಪತ್ರಿಕೆಗಳೂ ಸೇರಿ ಒಟ್ಟು ೪೦ ಕ್ಕೂ ಹೆಚ್ಚು ಸ್ವತಂತ್ರ ಹಾಗೂ ಅನುವಾದಿತ ಕಾದಂಬರಿಗಳು ಧಾರಾವಾಹಿಯಾಗಿಯೇ ಪ್ರಕಟಗೊಂಡು ದಾಖಲೆಯನ್ನೇ ನಿರ್ಮಿಸಿದ್ದಾರೆ.

ಅಲೆಗಳು, ಧ್ವನಿಗಳು, ಸ್ನೇಹವಾರ್ತೆ, ಹಸಿರು ತೋರಣ ಮುಂತಾದ ೧೦ ಕ್ಕೂ ಹೆಚ್ಚು ವಿವಿಧ ವಿಷಯಗಳ ಮೇಲೆ ಇತರರೊಡನೆ ಸೇರಿ ಸಂಪಾದಿಸಿದ್ದಾರೆ. ಸುಮಾರು ೫೦ ಕ್ಕೂ ಹೆಚ್ಚು ಸ್ವತಂತ್ರ ಕಥೆಗಳು ಪ್ರಕಟವಾಗಿರುವುದರ ಜೊತೆಗೆ ೨೦೦ ಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ಅನುವಾದಿಸಿದ್ದಾರೆ.

ಹೀಗೆ ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತೊಡಗಿಸಿಕೊಂಡಿದ್ದು, ಭಾರ್ಗವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಲೆನಾಡ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಸೂರಿಯವರು ಸಾಹಿತ್ಯಲೋಕದಿಂದ ದೂರವಾದದ್ದು ೨೦೦೮ ರ ಮೇ ೨೫ ರಂದು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *