ಬಾದಶಹನ ಮನಸ್ಸಿನಲ್ಲಿ ಒಂದು ವಿಷಯ ಕೊರೆಯುತ್ತಿತ್ತು. ಆ ವಿಷಯ ಏನೆಂದರೆ, ಮೂರ್ಖರ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು? ಎಂಬ ಆಲೋಚನೆ ಬಾದಶಹನಿಗೆ ಪದೇ ಪದೇ ಜ್ಞಾಪಕ ಬರುತಿತ್ತು.
ಒಂದು ದಿನ ಅಕ್ಬರನ ದರಬಾರು ಸೇರಿತು. ಆಗ ಬಾದಶಹನಿಗೆ ಆ ವಿಷಯ ನೆನಪಾಯಿತು.
ಮೂರ್ಖನ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು? ಎಂಬ ಅಕ್ಬರ ನೆರೆದವರನ್ನು ಕೇಳಿದ. ಅಕ್ಬರನ ಪ್ರಶ್ನೆಗೆ ಬೀರಬಲ್ಲನು ಮುಗುಳು ನಕ್ಕ. ಆದರೆ, ಏನು ಮಾತನಾಡದೆ ಮೌನ ತಾಳಿ ಕುಳಿತ.
“ಜಹಾಂಪನಾ, ಮೂರ್ಖನ ಜತೆ ಕೆಲಸ ಬಿದ್ದರೆ ಯಾವ ಪ್ರಯೋಜನ? ಅಂಥ ಮೂರ್ಖರಿದ್ದರೆ ಅವರ ತಲೆ ಬೋಳಿಸಿ, ಕಟ್ಟೆಯ ಮೇಲೆ ಮೆರವಣಿಗೆ ಮಾಡಬೇಕು” ಎಂಬ ಒಬ್ಬ ದರಬಾರಿ ಸಲಹೆ ನೀಡಿದ.
“ಹುಜೂರ್, ಮೂರ್ಖನ ಸಹವಾಸವಾದರೆ ಆತನ ಮುಖಕ್ಕೆ ಕಪ್ಪು ಬಳಿದು, ಕಣ್ಣು ಕಟ್ಟಿ ಬಿಡಬೇಕು” ಎಂದು ಇನ್ನೊಬ್ಬ ಸೂಚಿಸಿದ. “ಖಾವಂದ್, ಮೂರ್ಖನನ್ನು ಕಂಡರೆ, ಅವನನ್ನು ನಗರದಿಂದ ಹೊರಹಾಕಿ ಗಡಿಪಾರು ಮಾಡಬೇಕು” ಎಂದು ಮತ್ತೊಬ್ಬ ಅಭಿಪ್ರಾಯ ವ್ಯಕ್ತಪಡಿಸಿದ.
[sociallocker]ಹೀಗೆ ಎಲ್ಲರೂ ತಮಗೆ ತಿಳಿದಂತೆ ಹೇಳಿದರು. ಅವರ ಯಾವ ಉತ್ತರಗಳೂ ಸಮಂಜಸವಾಗದೆ ಬಾದಶಹ ಬೀರಬಲ್ಲನತ್ತ ನೋಟ ಬೀರಿದ. “ಜಹಾಂಪನಾ, ನನಗೆ ನಾಲ್ಕು ದಿನಗಳ ಅವಕಾಶ ಕೊಡಿರಿ. ಸರಿಯಾದ ಉತ್ತರ ಹೇಳಬಲ್ಲೆ” ಎಂದು ಬೀರಬಲ್ಲ ಉತ್ತರಿಸಿದ.ಮರುದಿನ ಬೀರಬಲ್ಲ ಪಕ್ಕದ ಗ್ರಾಮಕ್ಕೆ ಹೋದ. ಅಲ್ಲಿ ಭಾರೀ ಗಾತ್ರದ ಬಲಿಷ್ಠ ವ್ಯಕ್ತಿ ಇದ್ದ. ಅವನನ್ನು ತನ್ನ ಜತೆ ಕರೆದುಕೊಂಡು ಬಂದ. “ನೋಡು, ಇನ್ನೂ ಮೂರು ದಿನ ಬಿಟ್ಟು ದರಬಾರಿಗೆ ಬರಬೇಕು. ನೀನು ನನ್ನ ಜೊತೆಯಾಗಿ ಇರು. ಅಕ್ಬರ ಬಾದಶಹ ನಿನಗೆ ಏನಾದರೂ ಪ್ರಶ್ನೆ ಕೇಳಬಹುದು. ಆಗ ನೀನು ಮೂಕನಾಗಿ ನಿಲ್ಲಬೇಕು” ಎಂದು ಆತನಿಗೆ ವಿವರಿಸಿ ಎಲ್ಲವನ್ನೂ ಹೇಳಿದ.
ಬೀರಬಲ್ಲ ಆ ಧೀರ್ಘಕಾಲ, ಬಲಿಷ್ಠ ವ್ಯಕ್ತಿಯನ್ನು ಹೇಳಿದ ದಿನ ದರಬಾರಿಗೆ ಕರೆತಂದ. ಆತನಿಗೆ ಸೊಗಸಾದ ಬಟ್ಟೆ ತೊಡಸಿದ್ದ. ಆ ಅಪರಿಚಿತನನ್ನು ಕಂಡು ಎಲ್ಲರಿಗೂ ಸೋಜಿಗ. ಸಭೆ ಸೇರಿತು. ಬಾದಶಹ ದರಬಾರಿಗೆ ಆಮಿಸಿದ ಎಲ್ಲರೂ ಗೌರವ ಸಲ್ಲಿಸಿದರು. ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತರು. ಆ ಭಾರೀ ಗಾತ್ರದ ವ್ಯಕ್ತಿ ಬೀರಬಲ್ಲನ ಬದಿಗೆ ನಿಂತುಕೊಂಡಿದ್ದ.
ಅರಸನಿಗೆ ಆ ವ್ಯಕ್ತಿಯನ್ನು ಕಂಡು ಅಚ್ಚರಿ. “ಇದೇನು? ಈ ವ್ಯಕ್ತಿ ಯಾರು?” ಎಂದು ಬಾದಶಹ ಬೀರಬಲ್ಲನನ್ನು ಕೇಳಿದ.
“ಜಹಾಂಪನ, ನಾಲ್ಕು ದಿನಗಳ ಹಿಂದೆ ತಾವೊಂದು ಪ್ರಶ್ನೆ ಕೇಳಿದ್ದೀರಿ! ಅದಕ್ಕೆ ಉತ್ತರ ಈ ವ್ಯಕ್ತಿ” ಎಂದು ಬೀರಬಲ್ಲ ಹೇಳಿದ. ಬಾದಶಹನಿಗೆ ಇನ್ನೂ ಸೋಜಿಗವಾಯಿತು. “ಅದಕ್ಕೂ ಇವನಿಗೂ ಏನು ಸಂಬಂಧ? “ಬಾದಶಹ ಕೇಳಿದ.
“ಸಂಬಂಧವಿದೆ ಮಹಾರಾಜ, ಅಂದಿನ ಪ್ರಶೆಯನ್ನು ಈತನಿಗೆ ಕೇಳಿರಿ, ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು” ಎಂದ ಬೀರಬಲ್ಲ.
“ಮೂರ್ಖನ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು?” ಎಂದು ಬಾದಶಹ ಆ ಪೈಲವಾನನನ್ನು ಕೇಳಿದ. ಆತ ಕಿವಿ ಕೇಳಿಸದಂತೆ ಮೂಕನಾಗಿ ನಿಂತಿದ್ದ. ಮತ್ತೆ ಅಕ್ಬರ ಅದೇ ಪ್ರಶೆಯನ್ನು ಒಂದಿಷ್ಟು ಜೋರಾಗಿ ಕೇಳಿದ. ಆಗಲೂ ಆತ ಕಿವುಡನಂತೆ ನಿಂತಿದ್ದ. ಮತ್ತೆ ಕೇಳಿದ. ಉತ್ತರವಿಲ್ಲ.
“ಬೀರಬಲ್ಲ, ಈತ ಕಿವುಡನೇ? ಉತ್ತರವನ್ನೇ ಕೊಡುತ್ತಿಲ್ಲವಲ್ಲ..!” ಎಂದು ಬಾದಶಹ ಸಿಡಿಮಿಡಿಗೊಂಡ.
“ಖಾವಂದ್, ಆತ ಉತ್ತರ ಕೊಡುತ್ತಿದ್ದಾನೆ. ತಾವೇ ಅರ್ಥ ಮಾಡಿಕೊಂಡಿಲ್ಲ. ಆತನ ಉತ್ತರವಿಷ್ಟೆ, ಮೂರ್ಖನ ಜೊತೆ ಕೆಲಸ ಬಿದ್ದರೆ ಸುಮ್ಮನಿದ್ದುಬಿಡುವುದು” ಎಂದು ಬೀರಬಲ್ಲ ವಿವರಿಸಿದ. ಅಕ್ಬರನ ಪ್ರಶ್ನೆಗೆ ಉತ್ತರ ಹೊಳೆದಿತ್ತು.
ನೀತಿ: ಕೆಲವೊಂದು ಸಲ ನಮಗೆ ಬೇಕಾದ ಉತ್ತರ ಬೇರೆಯವರು ತನ್ನ ಶೈಲಿಯಲ್ಲಿ ತೋರಿಸಿದರು ಸಹ ನಾವು ಅದನ್ನು ಗ್ರಹಿಸುವುದಿಲ್ಲ.[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.