ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 09

ಸಂಜಯ ಉವಾಚ ।
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥೯॥

ಸಂಜಯ ಉವಾಚ-ಸಂಜಯ ಹೇಳಿದನು :

ಏವಮ್ ಉಕ್ತ್ವಾ ತತಃ ರಾಜನ್ ಮಹಾಯೋಗೇಶ್ವರೋ ಹರಿಃ ।

ದರ್ಶಯಾಮ್ ಆಸ ಪಾರ್ಥಾಯ ಪರಮಮ್ ರೂಪಮ್ ಐಶ್ವರಮ್ –ಅರಸನೇ, ಹಿರಿಯ ಶಕ್ತಿಗಳ ಒಡೆಯನಾದ ಹರಿ ಹೀಗೆ ನುಡಿದು, ಅರ್ಜುನನಿಗೆ ತೋರಿಸಿದನು ಜಗವನಾಳುವ ಹಿರಿಯ ರೂಪವನ್ನು.

ವ್ಯಾಸರಿಂದ ದಿವ್ಯ ದೃಷ್ಟಿ ಪಡೆದು, ಯುದ್ಧರಂಗದಲ್ಲಿ ನಡೆಯುತ್ತಿರುವ ಘಟನೆಗಳ ವಿವರಣೆಯನ್ನು ಧೃತರಾಷ್ಟ್ರನಿಗೆ ಕೊಡುತ್ತಿರುವ ಸಂಜಯ ಕೂಡ ಭಗವಂತನ ವಿಶ್ವರೂಪವನ್ನು ಕಾಣುತ್ತಾನೆ. ಆತ ಧೃತರಾಷ್ಟ್ರನಲ್ಲಿ ಹೇಳುತ್ತಾನೆ: “ಓ ರಾಜನ್, ಈ ರೀತಿ ಹೇಳಿ ಮಹಾಯೋಗೇಶ್ವರ ಹರಿಯು ತನ್ನ ಹಿರಿಯರೂಪವನ್ನು ತೋರಿದನು” ಎಂದು. ಇಲ್ಲಿ ಬಳಕೆಯಾಗಿರುವ ‘ತತಃ’ ಅನ್ನುವ ಪದ ಈ ಶ್ಲೋಕದಲ್ಲಿ ವಿಶೇಷ ಅರ್ಥವನ್ನು ಕೊಡುತ್ತದೆ. ಅರ್ಜುನನು ದಿವ್ಯ ದೃಷ್ಟಿ ಸಂಪನ್ನನಾದ್ದರಿಂದ, ದಿವ್ಯರೂಪ ದರ್ಶನ ನೋಡುವ ಅಧಿಕಾರ ಸಂಪನ್ನನಾದ್ದರಿಂದ, ಎಲ್ಲಾ ಕಡೆ ತುಂಬಿರುವ ಭಗವಂತ, ತನ್ನ ವಿಶ್ವರೂಪವನ್ನು ಆತನಿಗೆ ತೋರಿದ-ಎನ್ನುವ ಭಾವವನ್ನು ಈ ಪದ ಕೊಡುತ್ತದೆ. ಬ್ರಹ್ಮಾದಿ ಸರ್ವ ದೇವತೆಗಳಿಗೂ ಒಡೆಯನಾದ ಭಗವಂತನನ್ನು ಸಂಜಯ ಇಲ್ಲಿ ಮಹಾಯೋಗೇಶ್ವರಃ ಎಂದು ಸಂಬೋಧಿಸಿದ್ದಾನೆ. ಇಲ್ಲಿ ಬಳಸಿರುವ ‘ಹರಿಃ’ ಎನ್ನುವ ಪದ ಭಗವಂತನ ಸರ್ವಗತತ್ವವನ್ನು ವಿವರಿಸುವ ಪದ. ಯಾರು ಯಾವ ದೇವತಾ ಮುಖದಲ್ಲಿ ಆಹುತಿ ಕೊಟ್ಟರೂ ಅದನ್ನು ಮೊದಲು ಪಡೆಯುವ ಭಗವಂತ ಹರಿಃ.

ಮುಂದಿನ ಶ್ಲೋಕದಲ್ಲಿ ಸಂಜಯ ತಾನು ಕಂಡ ಭಗವಂತನ ವಿಶ್ವರೂಪದ ವರ್ಣನೆ ಮಾಡುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *