ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 46

ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ ॥೪೬॥

ಕಿರೀಟಿನಮ್ ಗದಿನಮ್ ಚಕ್ರಹಸ್ತಮ್ ಇಚ್ಛಾಮಿ ತ್ವಾಮ್ ದ್ರಷ್ಟುಮ್ ಅಹಮ್ ತದಾ ಏವ ।

ತೇನ ಏವ ರೂಪೇಣ ಚತುಃ ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ—ಮುಕುಟವಿಟ್ಟ, ಕೈಯಲ್ಲಿ ಗದೆ-ಚಕ್ರ ತೊಟ್ಟ ನಿನ್ನನ್ನು ಆ ರೂಪದಲ್ಲೆ ಕಾಣಬಯಸುತ್ತೇನೆ. ಸಾವಿರ ತೋಳಿನ ವಿಶ್ವರೂಪನೆ, ಮತ್ತೊಮ್ಮೆ ನಾಲ್ಕು ತೋಳಿನ ಅದೇ ರೂಪದಿಂದ ಕಾಣಿಸಿಕೊ.

“ನೀನು ಹಿಂದೆ ಕಾಣಿಸಿಕೊಂಡಂತೆ ಚತುರ್ಭುಜನಾಗಿ, ಕಿರೀಟ ಧರಿಸಿದ ಗದಾ-ಚಕ್ರ ಹಿಡಿದಿರುವ ನಿನ್ನ ರೂಪವನ್ನು ತೋರು” ಎಂದು ಅರ್ಜುನ ಸಹಸ್ರ ತೋಳಿನ ವಿಶ್ವರೂಪಿ ಭಗವಂತನಲ್ಲಿ ಕೈಜೋಡಿಸಿ ಬೇಡಿಕೊಳ್ಳುತ್ತಾನೆ. ಇಲ್ಲಿ ಅರ್ಜುನ ಕೃಷ್ಣನಲ್ಲಿ –“ನಿನ್ನ ಚತುರ್ಭುಜ ರೂಪವನ್ನು ತೋರು” ಎಂದಿದ್ದಾನೆ. ಕೃಷ್ಣ ತನ್ನ ಅಂತರಂಗದ ಭಕ್ತರಿಗೆ ತನ್ನ ಚತುರ್ಭುಜ ರೂಪವನ್ನು ತೋರಿದ್ದ. ಇದನ್ನು ಅರ್ಜುನ ಕೂಡ ನೋಡಿದ್ದಾನೆ. ಭಾಗವತದಲ್ಲಿ- ಬಾಲಕನಾಗಿದ್ದಾಗ ಕೃಷ್ಣ ತನ್ನ ಚತುರ್ಭುಜ ರೂಪವನ್ನು ತೋರಿದ್ದ ಎನ್ನುವುದನ್ನು ಹೀಗೆ ಹೇಳಿದ್ದಾರೆ:

ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಗದಾದ್ಯುದಾಯುಧಂ,

ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಸೌಭಗಂ ||೧೦.೦೩.೯||

ಸಾಮಾನ್ಯರು ಕಾಣದ ಭಗವಂತನ ಚತುರ್ಭುಜ ರೂಪವನ್ನು ಕೃಷ್ಣ ಕೆಲವರಿಗೆ ತೋರಿದ್ದ ಎನ್ನುವುದನ್ನು ಈ ಶ್ಲೋಕ ದೃಡಪಡಿಸುತ್ತದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಆತನ ವಿಶ್ವರೂಪ ದರ್ಶನವನ್ನು ಕೊನೆಗೊಳಿಸಿ ತನಗೆ ಚತುರ್ಭುಜ ರೂಪವನ್ನು ತೋರಿಸು ಎಂದು ಬೇಡಿಕೊಳ್ಳುತ್ತಾನೆ.

ಇಲ್ಲಿ ನಾವು ತಿಳಿಯಬೇಕಾದ ಮುಖ್ಯ ವಿಚಾರ ಎಂದರೆ: ಭಗವಂತನ ವಿಶ್ವರೂಪದ ಉಪಾಸನೆ ಸಾಮಾನ್ಯರಾದ ನಮಗೆ ಅಸಾಧ್ಯ. ಆತನ ವಿಶ್ವರೂಪವನ್ನು ಮಹಾ ಜ್ಞಾನಿಯಾದ ಅರ್ಜುನನಿಂದಲೇ ನೋಡಿ ತಡೆದುಕೊಳ್ಳಲು ಆಗಿಲ್ಲ. ಹಾಗಿರುವಾಗ ನಾವು ಅದನ್ನು ನಮ್ಮ ಧ್ಯಾನದಲ್ಲಿ ಜೀರ್ಣಿಸಿಕೊಳ್ಳವುದು ಸಾಧ್ಯವೇ? ಈ ಕಾರಣಕ್ಕಾಗಿ ಧ್ಯಾನದಲ್ಲಿ ಭಗವಂತನ ವಿಶ್ವ ರೂಪವನ್ನು ಉಪಾಸನೆ ಮಾಡುವುದಕ್ಕಿಂತ, ಭಗವಂತನ ವಿಶ್ವ ಶಕ್ತಿಯ ಎಚ್ಚರದಿಂದ ಆತನ ಅವತಾರ ರೂಪದಲ್ಲಿ ಆತನನ್ನು ಉಪಾಸನೆ ಮಾಡುವುದು ಶ್ರೇಯಸ್ಕರ.

ಅರ್ಜುನನ ಈ ಬೇಡಿಕೆಯನ್ನು ಕೃಷ್ಣ ಹೇಗೆ ಪುರಸ್ಕರಿಸಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *