ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 32

ಭಗವಾನುವಾಚ ।
ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ।
ಋತೇSಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇSವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥೩೨॥

ಭಗವಾನುವಾಚ-ಭಗವಂತ ಹೇಳಿದನು :

ಕಾಲಃ ಅಸ್ಮಿ ಲೋಕಕ್ಷಯಕೃತ್ ಪ್ರವೃದ್ಧಃ ಲೋಕಾನ್ ಸಮಾಹರ್ತುಮ್ ಇಹ ಪ್ರವೃತ್ತಃ ।

ಋತೇ ಅಪಿ ತ್ವಾಮ್ ನ ಭವಿಷ್ಯಂತಿ ಸರ್ವೇ ಯೇ ಅವಸ್ಥಿತಾಃ ಪ್ರತಿ ಅನೀಕೇಷು ಯೋಧಾಃ –ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನು. ಈಗಿಲ್ಲಿ, ಲೋಕಗಳನ್ನು ಮುಗಿಸಿಬಿಡಲೆಂದು ಹೊರಟವನು. ನೀನಿರದಿದ್ದರೂ [ನಿನ್ನನ್ನು, ನಿನ್ನ ಸೋದರರನ್ನು ಮತ್ತೆ ಕೆಲವರನ್ನು ಬಿಟ್ಟು] ಎರಡೂ ಕಡೆಯ ಪಡೆಗಳಲ್ಲಿ ನಿಂತ ಯಾವ ಕಾದಾಳುಗಳೂ ಉಳಿಯುವುದಿಲ್ಲ.

ಕೃಷ್ಣ ಹೇಳುತ್ತಾನೆ “ನಾನು ಕಾಲಪುರುಷನಾಗಿ ನಿಂತಿದ್ದೇನೆ” ಎಂದು. ‘ಕಲ’ ಧಾತುವಿನಿಂದ ಬಂದಿರುವ ‘ಕಾಲ’ ಅನ್ನುವ ಪದ ಅನೇಕ ಅರ್ಥವನ್ನು ಕೊಡುತ್ತದೆ. ಸರ್ವಸಂಹಾರಕ, ಸರ್ವಗುಣಪೂರ್ಣ, ಸರ್ವಜ್ಞ ಇತ್ಯಾದಿ. ಇಲ್ಲಿ ವಿಶೇಷವಾಗಿ ಕೃಷ್ಣ ಸಂಹಾರ ಶಕ್ತಿಯಾಗಿ ನಿಂತಿದ್ದಾನೆ. ನಾನು ನಿನಗೆ ಸಾರಥಿಯಾಗಿ ನಿಂತು ಭೂಮಿಗೆ ಭಾರವಾಗಿರುವ ಇವರನ್ನು ಮುಗಿಸಲೆಂದೇ ನಿಂತಿರುವುದು ಎನ್ನುತ್ತಾನೆ ಕೃಷ್ಣ. ಮಹಾಭಾರತ ಯುದ್ಧವನ್ನು ನೋಡಿದರೆ ಅದು ಒಂದು ಮಹಾಯುದ್ಧ. ಅಲ್ಲಿ ಸುಮಾರು ಐವತ್ತು ಲಕ್ಷ ಮಂದಿ ಸತ್ತಿದ್ದಾರೆ. ಅಂದಿನ ದೇಶದ ಜನಸಂಖ್ಯೆಯನ್ನು ನೋಡಿದರೆ ಅದು ಒಟ್ಟು ಜನಸಂಖ್ಯೆಯ ಸುಮಾರು ಹತ್ತನೇ ಒಂದು ಭಾಗ. ಭಾಗವತದಲ್ಲಿ ಹೇಳುವಂತೆ- ಕಾಲಪುರುಷನಾಗಿ ನಿಂತು ಕೃಷ್ಣ ಯಾವುದೇ ಆಯುಧ ಹಿಡಿಯದೆ ಎಲ್ಲರ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದ. ಅದಕ್ಕಾಗಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ- “ನೀನಿಲ್ಲದಿದ್ದರೂ ಇವರೆಲ್ಲರೂ(ಎರಡೂ ಕಡೆಯವರು) ಸಾಯುತ್ತಾರೆ. ಅವರ ಸಾವು ತೀರ್ಮಾನವಾಗಿ ಬಿಟ್ಟಿದೆ” ಎಂದು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *