ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 03

ಏವಮೇತದ್ ಯಥಾSSತ್ಥ ತ್ವಮಾತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ॥೩॥

ಏವಮ್ ಏತತ್ ಯಥಾ ಆತ್ಥ ತ್ವಮ್ ಆತ್ಮಾನಮ್ ಪರಮೇಶ್ವರ ।

ದ್ರಷ್ಟುಮ್ ಇಚ್ಛಾಮಿ ತೇ ರೂಪಮ್ ಐಶ್ವರಮ್ ಪುರುಷೋತ್ತಮ –ಪರಮೇಶ್ವರ, ನೀನು ನಿನ್ನ ಬಗೆಗೆ ಏನಂದೆಯೋ ಅದೆಲ್ಲ ನಿಜ. ಓ ಪುರುಷೋತ್ತಮ, ಜಗವನಾಳುವ ನಿನ್ನ ರೂಪವನ್ನು ಕಾಣುವ ತವಕ ನನಗೆ.

“ನೀನು ಹೇಳಿದ್ದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎನ್ನುತ್ತಾನೆ ಅರ್ಜುನ. ಇಲ್ಲಿ ಅರ್ಜುನ ಕೃಷ್ಣನನ್ನು ‘ಪರಮೇಶ್ವರಃ’ ಎಂದು ಸಂಬೋಧಿಸಿದ್ದಾನೆ. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವ ಅಂತಃಕರಣ ಹಾಗು ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗು ಬ್ರಹ್ಮ ವಾಯು-ಈಶ್ವರರು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೇಶ್ವರಃ. “ನೀನು ಹೇಳಿದ ವಿಚಾರದಲ್ಲಿ ನನಗೆ ಗೊಂದಲವಿಲ್ಲ. ಏಕೆಂದರೆ ನೀನು ಪರಮೇಶ್ವರಃ. ಆದರೆ ನನಗೆ ಆ ನಿನ್ನ ಸರ್ವಸಾಮರ್ಥ್ಯದಿಂದ ತುಂಬಿದ ರೂಪವನ್ನು ಕಾಣುವ ತವಕವಾಗುತ್ತಿದೆ” ಎಂದು ‘ಭಗವಂತನ ಅದ್ಭುತ ರೂಪವನ್ನು ಕಾಣಬೇಕು’ ಎನ್ನುವ ತನ್ನ ಬಯಕೆಯನ್ನು ಅರ್ಜುನ ಕೃಷ್ಣನ ಮುಂದಿಡುತ್ತಾನೆ.

ಇಲ್ಲಿ ಅರ್ಜುನ ಭಗವಂತನನ್ನು ‘ಪುರುಷೋತ್ತಮಃ’ ಎಂದು ಸಂಬೋಧಿಸಿದ್ದಾನೆ. ಈ ಪದಕ್ಕಿರುವ ವಿಶಿಷ್ಠ ಅರ್ಥವನ್ನು ಕೃಷ್ಣ ಅಧ್ಯಾಯ ಹದಿನೈದರಲ್ಲಿ(ಅ-೧೫, ಶ್ಲೋ-೧೬-೧೮) ವಿವರವಾಗಿ ವಿವರಿಸಿದ್ದಾನೆ. ಲೋಕದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭). ಕ್ಷರವನ್ನು ಮೀರಿ ನಿಂತವನು, ಅಕ್ಷರಕ್ಕಿಂತಲೂ ಹಿರಿಯನು ಆದ ಆ ನಾರಾಯಣ ‘ಪುರುಷೋತ್ತಮ’.(ಅ-೧೫, ಶ್ಲೋ-೧೮). “ನಿನ್ನ ಪುರುಷೋತ್ತಮತ್ವದ ರೂಪವನ್ನು ನಾನು ಕಾಣಬೇಕು” ಎನ್ನುವ ಅಭಿಲಾಷೆಯನ್ನು ಅರ್ಜುನ ಕೃಷ್ಣನ ಮುಂದಿಟ್ಟ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *