ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 16

ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋSನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾSದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥೧೬॥

ಅನೇಕ ಬಾಹು ಉದರ ವಕ್ತ್ರ ನೇತ್ರಮ್ ಪಶ್ಯಾಮಿ ಸರ್ವತಃ ಅನಂತ ರೂಪಮ್ ।

ನ ಅಂತಮ್ ನ ಮಧ್ಯಮ್ ನ ಪುನಃ ತವ ಆದಿಮ್ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ – ಎಣಿಕೆಯಿರದ ತೋಳುಗಳು, ಒಡಲು, ಬಾಯಿ, ಕಣ್ಣುಗಳು. ಎಲ್ಲೆಡೆಯು ಎಣಿಕೆಯಿರದ ರೂಪಗಳ ನಿನ್ನನ್ನು ಕಾಣುತ್ತಿದ್ದೇನೆ. ಓ ಪೊಡವಿಗೊಡೆಯನೆ, ಓ ವಿಶ್ವರೂಪನೆ, ನಿನ್ನ ತುದಿ ಕಾಣುತ್ತಿಲ್ಲ; ಇಲ್ಲ ನಡು; ಇಲ್ಲ ಬುಡ ಕೂಡ.

ಎಲ್ಲಿ ನೋಡಿದರಲ್ಲಿ ಮುಖ, ಎಲ್ಲಿ ನೋಡಿದರಲ್ಲಿ ಕಣ್ಣು, ಎಲ್ಲಿ ನೋಡಿದರಲ್ಲಿ ತೋಳು, ಎಲ್ಲಿ ನೋಡಿದರಲ್ಲಿ ಉದರ. ಈ ಶ್ಲೋಕ ಪುರುಷಸೂಕ್ತಕ್ಕೆ ವ್ಯಾಖ್ಯಾನ ರೂಪದಲ್ಲಿದೆ. ಪುರುಷ ಸೂಕ್ತದಲ್ಲಿ ಹೇಳುವಂತೆ: “ಓಂ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | -ಭಗವಂತನಿಗೆ ಸಹಸ್ರಾರು ಶಿರಗಳು, ಸಹಸ್ರಾರು ಕಣ್ಣುಗಳು, ಸಹಸ್ರಾರು ಪಾದಗಳು. ಎಲ್ಲಿ ಏನನ್ನು ಕಾಣಬೇಕೆಂದು ಅಪೇಕ್ಷೆ ಪಟ್ಟು ಅರ್ಜುನ ಕಂಡನೋ ಅಲ್ಲಿ ಆತ ಬಯಸಿದ್ದು ಕಾಣಿಸಿತು. ಇದು ಒಂದು ವಿಚಿತ್ರ ಅನುಭವ. ಇದನ್ನು ವಿವರಿಸುವುದು ಅಸಾಧ್ಯ. ಕೇವಲ ಅನುಭವಿಸಬೇಕು. ಅನಂತ ರೂಪಿ ಭಗವಂತನ ರೂಪಕ್ಕೆ ತುದಿ ಬುಡವಿಲ್ಲ. ಸಮಸ್ತ ಜಗದ ಸ್ವಾಮಿ ಭಗವಂತ ಅಣುವಿಗಿಂತ ಅಣು ಕೂಡಾ ಹೌದು, ಮಹತೋಮಯ ಕೂಡ ಹೌದು. ಭಗವಂತನ ಈ ರೂಪವನ್ನು ಧ್ಯಾನದಲ್ಲಿ ಕಾಣುವುದು ಬಹಳ ಕಷ್ಟ. ಶಾಸ್ತ್ರಕಾರರು ಹೇಳುವಂತೆ ಧ್ಯಾನದಲ್ಲಿ ಭಗವಂತನ ಪೂರ್ಣ ಶರೀರ ಕಾಣಬೇಕು ಎಂದುಕೊಂಡು ಕುಳಿತರೆ ಏನೂ ಕಾಣದೆ ಇರಬಹುದು. ಅದಕ್ಕಾಗಿ ಕೊಳಲನೂದುವ ಆತನ ಒಂದು ಕಿರಿ ಬೆರಳಿನ ಮೇಲೋ, ಆತನ ಕರುಣಾಪೂರ್ಣ ಕಣ್ಣಿನ ನೋಟವನ್ನೋ ಕೇಂದ್ರೀಕರಿಸಿ ಧ್ಯಾನ ಅಭ್ಯಾಸ ಮಾಡುವುದು ಒಳ್ಳೆಯದು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *