ಮುಖಪುಟ » ಆಧ್ಯಾತ್ಮ » ಭಗವದ್ಗೀತೆ ಶ್ಲೋಕಗಳು » ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 01

ಹಿಂದಿನ ಅಧ್ಯಾಯದಲ್ಲಿ ಮುಖ್ಯವಾಗಿ ಭಗವಂತನ ಉಪಾಸನೆಯ ಸಾಧನೆಯನ್ನು ವಿವರಿಸಿದ ಕೃಷ್ಣ ಈಗ ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು ಧ್ಯಾನಸಮಾಧಿಯನ್ನು ತಳಸ್ಪರ್ಶಿಯಾಗಿ ವಿವರಿಸುತ್ತಾನೆ.

ಭಗವಾನುವಾಚ ।
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ ।
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ॥೧॥

ಭಗವಾನುವಾಚ- ಭಗವಂತ ಹೇಳಿದನು :

ಅನಾಶ್ರಿತಃ ಕರ್ಮ ಫಲಮ್ ಕಾರ್ಯಮ್ ಕರ್ಮ ಕರೋತಿ ಯಃ ।

ಸಃ ಸಂನ್ಯಾಸೀ ಚ ಯೋಗೀ ಚ ನ ನಿಃ ಅಗ್ನಿಃ ನ ಚ ಅಕ್ರಿಯಃ –ಕರ್ಮದ ಫಲನ್ಯಾಸ ಮಾಡಿ ಕರ್ತವ್ಯವನ್ನು ಮಾಡುತ್ತಿರುವವನೆ ನಿಜವಾದ ಸಂನ್ಯಾಸಿ ಮತ್ತು ನಿಜವಾದ ಯೋಗಿ. ಬೆಂಕಿಯಲ್ಲಿ ಹೋಮಿಸದವನಲ್ಲ, ಕರ್ಮವನ್ನು ತೊರೆದವನೂ ಅಲ್ಲ.

ಸಾಮಾನ್ಯವಾಗಿ ನಾವು ಕರ್ಮಯೋಗಿಗಳು ಬೇರೆ ಮತ್ತು ಸಂನ್ಯಾಸಿಗಳು ಬೇರೆ ಎಂದು ಎರಡು ಗುಂಪು ಮಾಡುತ್ತೇವೆ. ಇಲ್ಲಿ ಕೃಷ್ಣ ಯಾರು ಸಂನ್ಯಾಸಿಗಳು, ಯಾರು ಕರ್ಮಯೋಗಿಗಳು ಎನ್ನುವ ಲೋಕದ ಕಲ್ಪನೆಗಿಂತ ಭಿನ್ನವಾದ ವಿವರವನ್ನು ಈ ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಕೃಷ್ಣ ಹೇಳುತ್ತಾನೆ “ಅನಾಶ್ರಿತಃ ಕರ್ಮಫಲಂ” ಎಂದು. ನಾವು ಸಾಮಾನ್ಯವಾಗಿ ಕರ್ಮತ್ಯಾಗ ಮಾಡಿದವರು ಸಂನ್ಯಾಸಿಗಳು, ಕರ್ಮ ಮಾಡುವವರು ಗೃಹಸ್ಥರೆಂದು ಭಾವಿಸುತ್ತೇವೆ. ಆದರೆ ಕೃಷ್ಣ ಹೇಳುತ್ತಾನೆ ಪ್ರತಿಯೊಬ್ಬರೂ ಕರ್ಮಯೋಗಿಗಳಾಗಬೇಕು ಮತ್ತು ಪ್ರತಿಯೊಬ್ಬರೂ ಸಂನ್ಯಾಸಿಗಳಾಗಬೇಕು ಎಂದು. ಇದು ಒಂದನ್ನು ಬಿಟ್ಟು ಒಂದು ಇರತಕ್ಕದ್ದಲ್ಲ. ಸಂನ್ಯಾಸಿ ಎಂದರೆ ನಾವು ಮಾಡಿದ್ದನ್ನೆಲ್ಲಾ ಭಗವಂತನಿಗೆ ಅರ್ಪಿಸುವುದೇ ಹೊರತು ಏನೂ ಮಾಡದೆ ಇರುವುದಲ್ಲ.(ಹಿಂದೆ ಕರ್ಮ ಸಂನ್ಯಾಸದ ಬಗ್ಗೆ ವಿವರಿಸುವಾಗ ಈ ಬಗ್ಗೆ ನೋಡಿದ್ದೇವೆ). ಸಮಸ್ತ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸಂ-ನ್ಯಾಸ. ಇಲ್ಲಿ ಬಹಳ ಮುಖ್ಯವಾದ ವಿಷಯ ಎಂದರೆ ಕರ್ಮದ ಫಲದ ಬಯಕೆಯನ್ನು ಸಂಪೂರ್ಣನಾದ ಭಗವಂತನ ಹೃದಯದಲ್ಲಿ ನೆಲೆಗೊಳಿಸಬೇಕು.

ಸಂನ್ಯಾಸ ಎಂದರೆ ತನ್ನ ಕುಟುಂಬವನ್ನು ತೊರೆದು ಕಾಡಿಗೆ ಹೋಗುವುದಲ್ಲ. ಕರ್ಮಯೋಗ ಮಾಡಲೇ ಬೇಕು. “ಕಾರ್ಯಂ ಕರ್ಮ ಕರೋತಿ ಯಃ” ಯಾರ್ಯಾರಿಗೆ ಯಾವುದ್ಯಾವುದು ಕಾರ್ಯವೋ ಅವರವರು ಅದನ್ನದನ್ನು ಮಾಡಬೇಕು. ಈ ಕಾರಣಕ್ಕಾಗಿ ಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟೊಟ್ಟಿಗಿರುವುದು. ನಿಜವಾದ ಸಂನ್ಯಾಸಿ ಕರ್ಮಯೋಗಿಯಾಗಿರುತ್ತಾನೆ, ಮತ್ತು ನಿಜವಾದ ಕರ್ಮಯೋಗಿ ಸಂನ್ಯಾಸಿಯಾಗಿರುತ್ತಾನೆ. ಇದಲ್ಲದೆ ನಾವು ತಿಳಿದಂತೆ ಅಗ್ನಿಯನ್ನು ತ್ಯಾಗ ಮಾಡಿದವರು, ಕರ್ಮವನ್ನು ತ್ಯಾಗ ಮಾಡಿದವರು ಸಂನ್ಯಾಸಿಗಳು ಅಥವಾ ಯೋಗಿಗಳಲ್ಲ.

ಸಂನ್ಯಾಸಿ ಎಂದೂ ನಿಷ್ಕ್ರೀಯ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕ್ರಿಯೆ ಇರುತ್ತದೆ. ಬ್ರಹ್ಮಚಾರಿಯಾದವನು ಅಧ್ಯಯನ, ಗುರುಕುಲವಾಸ, ಗುರು ಶುಶ್ರೂಷೆ, ಇತ್ಯಾದಿ ಕಾರ್ಯ ಮಾಡಿದರೆ, ಗ್ರಹಸ್ಥ ಅತಿಥಿಸತ್ಕಾರ, ಸಂಸಾರ ಪಾಲನೆ ಇತ್ಯಾದಿ ಕಾರ್ಯವನ್ನು ಮಾಡುತ್ತಾನೆ. ಹೀಗಾಗಿ ಎಲ್ಲರಿಗೂ ಕರ್ಮವಿದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

Share this on WhatsApp ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ …

Loading...
Facebook Messenger for Wordpress