ಮುಖಪುಟ » ಕವಿಗಳು | ಸಾಹಿತಿಗಳು | ಕಲಾವಿದರು » ಸಾಹಿತಿಗಳು » ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ
Mallikarjuna S Latte

ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ

ಡಾ. ಮಲ್ಲಿಕಾರ್ಜುನ ಎಸ್. ಲಠ್ಠೆ (೧೨-೪-೧೯೩೨ – ೧೯-೧೧-೨೦೦೭): ಜಾನಪದ ತಜ್ಞ, ಸಂಶೋಧಕ, ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ. ತಂದೆ ಶಿವಪ್ಪ, ತಾಯಿ ಬಸವಮ್ಮ. ಪ್ರೈಮರಿ ವಿದ್ಯಾಭ್ಯಾಸ ನಡೆದುದು ಹಿರೇಬಾಗೇವಾಡಿಯಲ್ಲಿ. ಕಾಲೇಜಿಗೆ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಬಿ.ಎ. ಆನರ್ಸ್‌ ಪದವಿ. ಪೂನ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ಒಂದು ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವಿ.

ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಮತ್ತದೇ ಸಂಸ್ಥೆಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಎಂಟು ವರ್ಷ ಮತ್ತು ನಿಪ್ಪಾಣಿ ಕಾಲೇಜಿನಲ್ಲಿ ಏಳು ವರ್ಷ ಸೇವೆ. ನಂತರ ಕರ್ನಾಟಕ ವಿಶ್ವವಿದ್ಯಾಲದಲ್ಲಿ ಪಿ.ಜಿ. ಅಧ್ಯಾಪಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಿ.ಜಿ. ರೀಡರ್, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ವಿವಿಧ ಹುದ್ದೆ. ಸಂಶೋಧಕರಾಗಿ ಪಿಎಚ್.ಡಿ ಪಡೆದುದಲ್ಲದೆ ಆರು ಜನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು ಹತ್ತು ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳು ಯಶಸ್ಸು ಸಾಸಿ ಪದವಿ ಗಳಿಸಿದ ಹೆಗ್ಗಳಿಕೆ.

ಬರೆದು, ಸಂಪಾದಿಸಿದ ಗ್ರಂಥಗಳು ಹಲವಾರು. ಅಕ್ಕಮಹಾದೇವಿ, ಬಿಜ್ಜ ಮಹಾದೇವಿ, ಹರಿಹರ ಕವಿಯ ರಗಳೆ, ಶರಣುಲಿಯ ಚಂದಯ್ಯ, ಭೂಮರೆಡ್ಡಿ ಬಸಪ್ಪನವರು, ಶರಣಮಾದಾರ ಚನ್ನಯ್ಯ, ಶಿವಯೋಗಿ ಸಿದ್ಧರಾಮ, ಶರಣರ ಜೀವನ ದರ್ಶನ, ಕನ್ನಡ ಯಾತ್ರೆ, ಕರ್ಮಯೋಗಿ ಎಸ್.ಬಿ. ಪಾಟೀಲ, ಶರಣ ಮೇದಾರ ಕೇತಯ್ಯ ಮುಂತಾದ ಕೃತಿ ರಚನೆ. ಜಾನಪದ ಕೃತಿಗಳು-ಜಾನಪದ ದೀಪ್ತಿ (ಭಾಗ ೧-೨).

ಸಂದ ಪ್ರಶಸ್ತಿಗಳು: ಹಲವಾರು ಸಾಹಿತ್ಯ ಸಮ್ಮೇಳನ, ಜಾನಪದ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಇಳಕಲ್ ಮಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚೆಗೆ ಸಂದ ಗೌರವವೆಂದರೆ ಅಖಿಲ ಭಾರತ ೯ನೇ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದಾರೆ. ೧೯೮೨ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಸಾಹಿತ್ಯ ಸಂತುಷ್ಟಿ.’
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

Share this on WhatsApp ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ …

Loading...
Facebook Messenger for Wordpress