ಮುಖಪುಟ » ಕಥೆಗಳು » ಜೇನು ತಂದ ಸೌಭಾಗ್ಯ
honey

ಜೇನು ತಂದ ಸೌಭಾಗ್ಯ

ಬೀಳಿಗಿಯ ಯಂಕಪ್ಪ, ದಿನಾಲೂ ಊರಿನ ದನಗಾಹಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತುಂಬಾ ಬಡತನ. ಹೆಂಡತಿ ಹಾಗೂ ಬೆಳೆದು ನಿಂತ ಮಗಳೊಂದಿಗೆ ಜೀವನ ನಡೆಸುತ್ತಿದ್ದ. ಊರಿನ ಜನ ವರ್ಷಕ್ಕೊಮ್ಮೆ ನೀಡುತ್ತಿದ್ದ ಜೋಳ, ಕಾಳುಕಡಿ, ಅಲ್ಪ ಮೊತ್ತದ ಹಣ, ಜೀವನಕ್ಕೆ ಸಾಲುತ್ತಿರಲಿಲ್ಲ. ದನಗಳು ಹಾಕಿದ ಸೆಗಣಿಯ ಸಂಗ್ರಹದ ಮಾರಾಟದಿಂದ ಬಂದ ಅಲ್ಪಸ್ವಲ್ಪ ಹಣದಿಂದ ಹೊಟ್ಟೆ ಹೊರೆಯಲು ಅನುಕೂಲವಾಗುತ್ತಿತ್ತು. ಬೆಳಗಿನ ಜಾವ ಊರ ಹೊರ ಬಯಲಿನಲ್ಲಿ ಎಲ್ಲಾ ದನಗಳನ್ನು ನಿಲ್ಲಿಸಿ ನಂತರ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಕಾಡಿಗೆ ಮೇಯಿಸಲು ತೆರಳುತ್ತಿದ್ದ.

ಮಧ್ಯಾಹ್ನ ಸಮಯದಲ್ಲಿ, ಹಸಿರು ಮೇಯಿಸಿದ ದನಗಳು ಗಿಡಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ಯಂಕಪ್ಪ ಹಾಗೂ ಅವನ ಗೆಳೆಯನಾದ ರೊಳ್ಳಿ ಊರಿನ ದನಗಾಹಿ ಗಂಗಪ್ಪ ಇಬ್ಬರೂ ಸೇರಿ, ತಾವು ತಂದ ಬುತ್ತಿ ಬಿಚ್ಚಿ ಹಂಚಿಕೊಂಡು ಊಟ ಮಾಡುತ್ತಿದ್ದರು. ನಂತರದ ಸಮಯದಲ್ಲಿ, ದಿನಾಲೂ ಬೆಲ್ಲ ತಿನ್ನುವ ಹವ್ಯಾಸವಿದ್ದ ಯಂಕಪ್ಪ ಕೈತೊಳೆದುಕೊಂಡಾಗ ಬಿದ್ದ ಬೆಲ್ಲದ ನೀರಿಗೆ ಕಾಡಿನ ಅನೇಕ ಜೇನುನೊಣಗಳು ಮುತ್ತಿಗೆ ಹಾಕುವುದನ್ನು ನೋಡಿ ಸಂತೋಷಪಡುತ್ತಿದ್ದ, ಬರು ಬರುತ್ತಾ ಮಣ್ಣಿನ ಫರ‌್ಯಾಣದಲ್ಲಿ ಬೆಲ್ಲದ ನೀರು ಹಾಕಿ ಇಡುವ ಹವ್ಯಾಸ ರೂಢಿಸಿಕೊಂಡ. ಬಹಳ ಸಂಖ್ಯೆಯಲ್ಲಿ ಜೇನು ನೊಣಗಳು ಸಿಹಿ ನೀರಿಗೆ ಮುತ್ತಿಗೆ ಹಾಕಿ ಪಾಕವನ್ನು ಹೀರಿಕೊಂಡು ಗುಂಯ್‌ಗುಟ್ಟುವ ಸದ್ದು ಕೇಳಿ ಸಂತೋಷಪಡುತ್ತಿದ್ದ.

[sociallocker]ಯಂಕಪ್ಪನ ಈ ವಿಚಿತ್ರ ಹವ್ಯಾಸದ ನಡವಳಿಕೆಯು ಗಂಗಪ್ಪನಿಗೆ ಸೋಜಿಗೆ ತಂದಿತ್ತು. ‘ಏಕೆ? ಈ ಕೀಟಗಳ ಬಗ್ಗೆ ಇಷ್ಟೊಂದು ಪ್ರೀತಿ?’ ಎಂದು ಗಂಗಪ್ಪ ಕೇಳಿದಾಗ, ‘ಯಾಕೊ ಏನೋ, ಅವು ಎಲ್ಲಾ ಹೂಗಳ ಮಕರಂದ ಹೀರಿ ಜೇನು ತಯಾರಿಸಿ ಇನ್ನೇನು ಕುಡಿಯಬೇಕು ಎನ್ನುವಷ್ಟರಲ್ಲಿ ನಮ್ಮಂಥ ಜನರ ಪಾಲಾಗುತ್ತದೆ. ಯಾರದೋ ಶ್ರಮ ಯಾರಿಗೋ ಸುಖ. ಎಂಥಾ ಅನ್ಯಾಯ’ ಎಂದು ಮರುಕಪಟ್ಟಿದ್ದ. ಒಂದು ಮಧ್ಯಾಹ್ನ ಊಟಕ್ಕೆ ಕುಳಿತಾಗ ಗಂಗಪ್ಪ ಕೇಳಿದ, ‘ನಿನ್ನ ಮಗಳ ಮದುವೆ ವಿಚಾರ ಏನಾಯಿತು?’ ಅಂದಾಗ ‘ಯಾಕೋ ಏನೋ, ಬಂದ ವರ ನಿಲ್ಲಾವಲ್ಲದು. ಗ್ರಹಗತಿ ಸರಿ ಇಲ್ಲಾ ಅಂತಾ ಮಠದ ಆಚಾರಿಯವರು ಹೇಳ್ಯಾರ, ಎಲ್ಲಾ ದೇವರಿಗೆ ಬಿಟ್ಟಿದ್ದು ‘ ಎಂದು ನಿಟ್ಟುಸಿರು ಬಿಟ್ಟ ಯಂಕಪ್ಪಾ. ಜೇನುನೊಣಗಳಿಗೆ ಬೆಲ್ಲದ ನೀರು ಇಡುವ ಕಾಯಕ ಮುಂದುವರೆದಿತ್ತು.

ಒಂದು ವಾರದ ನಂತರ ಯಂಕಪ್ಪನ ಬಚ್ಚಲ ಮನೆಯಲ್ಲಿ ಜೇನುಗಳು ಗೂಡು ಕಟ್ಟಿದ ಸುದ್ದಿ ಇಡೀ ಊರಿಗೆ ಹಬ್ಬಿತು. ಕೆಲವು ಮಂದಿ, ‘ಹುಷಾರು, ಹುಳಗಳು ಕಚ್ಚಿ ಬಿಟ್ಟಾವು, ಬಿಡಿಸುವುದು ಉತ್ತಮ’ ಎಂದರು. ಇನ್ನು ಕೆಲವರು ಒಳ್ಳೆಯ ಲಕ್ಷಣ ಅಂದರು. ಅಂತೂ ಆಚಾರಿಯವರನ್ನು ಭೇಟಿ ಮಾಡಿದಾಗ ಜೇನಿನ ತಂಟೆಗೆ ಹೋಗದೆ ಇರುವುದೇ ವಾಸಿ ಎಂದು ಬಿಟ್ಟ. ದಿನದಿಂದ ದಿನಕ್ಕೆ ಜೇನು ಗೂಡು ಬೇಳೆಯುತ್ತಾ ಹೋಯಿತು. ಸ್ನಾನ ಮಾಡಲು ಹೋದವರಿಗೂ ಯಾವುದೇ ತೊಂದರೆ ಕೊಡಲಿಲ್ಲ. ಬೀಸಿ ನೀರಿನ ಒಲೆಯಿಂದ ಬರುವ ವಿಪರೀತ ಹೊಗೆಗೂ ಜೇನು ಹುಳುಗಳು ಕಾಲ್ತೆಗೆಯಲಿಲ್ಲ. ಬರುಬರುತ್ತಾ ಗೂಡಿನ ತುಂಬಾ ಜೇನುತುಪ್ಪ ಭರ್ತಿಯಾಯಿತು. ಬಹಳಷ್ಟು ಜನರು ಜೇನು ಬಿಡಿಸಲು ಹಠ ಹಿಡಿದರೂ, ಯಂಕಪ್ಪ ಒಪ್ಪಲಿಲ್ಲ. ಕಾಕತಾಳಿಯವೆಂಬಂತೆ ಕೆಲವೇ ದಿನಗಳಲ್ಲಿ ಪಕ್ಕದ ಸೊನ್ನದ ಊರಿನ ತಿಪ್ಪಣ್ಣನ ಜೊತೆಗೆ ಯಂಕಪ್ಪನ ಮಗಳ ನಿಶ್ಚಯವು ಆಯಿತು. ಸರಳ ರೀತಿಯಲ್ಲಿ ಮದುವೆಯೂ ಆಯಿತು.

ಮಗಳನ್ನು ಗಂಡನ ಮನೆಗೆ ಕಳುಹಿಸುವ ದಿನವೂ ಬಂದಿತು. ಸಿಂಗರಿಸಿದ ಎತ್ತಿನ ಚಕ್ಕಡಿಯಲ್ಲಿ ಕೂಡ್ರಿಸಿ ತಿಳಿ ಹೇಳಿ ಊರಿನ ಸೀಮೆಯತನಕ ಬಿಟ್ಟು, ತುಂಬಿದ ಕಣ್ಣುಗಳಿಂದ ನೋವಿನೊಂದಿಗೆ ಮನೆಯತ್ತ ಮುಖ ಮಾಡಿದ, ಮನೆಯಲ್ಲಿ ಆಶ್ಚರ್ಯ ಕಾದಿತ್ತು. ಮಗಳ ಅಗಲಿಕೆಯ ಜೊತೆಗೆ ಜೇನು ಹುಳುಗಳಿಲ್ಲದ ಬರಿದಾದ ಗೂಡು ಕಂಡು ದು:ಖ ಇಮ್ಮಡಿಯಾಯಿತು. ಬಂದ ಕೆಲಸವಾಯಿತೆಂಬಂತೆ ಕಾಕತಾಳೀಯವಾಗಿ ಜೇನು ಹುಳುಗಳ ಪಲಾಯನವಾದುದು ಅವನಿಗೆ ಸೋಜಿಗ ತಂದಿತ್ತು.
ಆಧಾರ : ವಿಜಯಕರ್ನಾಟಕ.ಇಂಡಿಯಾಟೈಮ್ಸ್ .ಕಾಮ್[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.39 ( 10 votes)

ಇವುಗಳೂ ನಿಮಗಿಷ್ಟವಾಗಬಹುದು

king

ಆತ್ಮ ಚೌರ್ಯ

Share this on WhatsApp ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ …

Loading...
Facebook Messenger for Wordpress