ಪಂಪ

ಪಂಪ (ಕ್ರಿ.ಶ. ೯೦೨-೯೫೦) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಎಂಬ ಎರಡು ಕೃತಿಗಳ ಕರ್ತೃ. ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನಾಗಿದ್ದನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ.

ಹಿನ್ನೆಲೆ

  • ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಲಬ್ಬೆ. ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ.
  • ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರೀ ನದಿಗಳ ನಡುವೆ ಇದ್ದ ಪ್ರದೇಶ. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ.
  • ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಱಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ.
  • ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ.
  • ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು.

ಜೀವನ

  • ಪಂಪನು ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಹೇಳಿಕೊಳ್ಳತ್ತ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ.
  • ಪಂಪನು ಪುಲಿಗೆರೆಯ ‘ತಿರುಳ್ ಗನ್ನಡ’ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ.
  • ಪಂಪನ ಇನ್ನೊಂದು ಕೃತಿ ‘ವಿಕ್ರಮಾರ್ಜುನ ವಿಜಯ‘ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ.
  • ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕುರ್ಕ್ಕ್ಯಾಲ್ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ.
  • ಪಂಪನನ್ನು “ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ” ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ.
  • ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. ‘ಹಿತಮಿತ ಮೃದುವಚನ’ ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ.
  • ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು.

ಕೃತಿಗಳು

ಆದಿಪುರಾಣ, ವಿಕ್ರಮಾರ್ಜುನ ವಿಜಯ

ರಶಸ್ತಿ, ಪುರಸ್ಕಾರ, ಬಿರುದು:  ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.

ಏಂ ಕಲಿಯೋ, ಸತ್ಕವಿಯೋ ಕವಿತಾಗುಣಾರ್ಣಭವಂ“ಎಂದು ಪಂಪನನ್ನು ಹೊಗಳಿದ್ದಾರೆ. “ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ” ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾನೆ

ಕವಿ ಸಂದೇಶ

ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆ ರಸಮದುಕಾಮಂ’- ಪಂಪನ ಜೀವನ ದೃಷ್ಟಿ.
ಕನ್ನಡನಾಡಿನ ಬಗ್ಗೆ ಅಪಾರ ಹೆಮ್ಮೆಯಿಂದ ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.
ಸೊಗಸಾಗಿ ಬಂದ ಮಾಮರನೆ ತಲ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನನಂಗಳೊಳಂ ಬನವಾಸಿ ದೇಶದೊಳ್|| ೪- ೨೮||

ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 5 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕುಮಾರವ್ಯಾಸ

Share this on WhatsAppಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ …

Loading...
Facebook Messenger for Wordpress