MN Kamath

ಎಂ.ಎನ್. ಕಾಮತ್

ಎಂ.ಎನ್. ಕಾಮತ್ (೧೭.೩.೧೮೮೩ – ೨೪.೪.೧೯೪೦): ಶಿಶು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮುಂಡ್ಕೂರು ನರಸಿಂಗ ಕಾಮತ್‌ರವರು ಹುಟ್ಟಿದ್ದು ಕಾರ್ಕಳದ ಬಳಿಯ ಮುಂಡ್ಕೂರು ಗ್ರಾಮದಲ್ಲಿ. ತಂದೆ ಶ್ರೀನಿವಾಸ ಕಾಮತ್, ತಾಯಿ ತುಂಗಭದ್ರ. ಪ್ರಾಥಮಿಕ ವಿದ್ಯಾಭ್ಯಾಸ ಪಡೆದದ್ದು ಕಾರ್ಕಳದಲ್ಲಿ. ಪ್ರೌಢ ಶಾಲಾ ವಿದ್ಯಾಭ್ಯಾಸಕ್ಕೆ ಸೇರಿದ್ದು ಮಂಗಳೂರಿನ ಕೆನರಾ ಹೈಸ್ಕೂಲು. ಅಲ್ಲಿ ಶ್ರೀ ಗೋವಿಂದ ಪೈಗಳ ಪರಿಚಯ. ಇಬ್ಬರಿಗೂ ಮೂಡಿದ ಸಾಹಿತ್ಯ ಒಲವಿನಿಂದ ಉಂಟಾದ ಸ್ನೇಹ. ಕೈಬರಹದ ಪತ್ರಿಕೆ ‘ಏಂಜಲ್’ ಪ್ರಾರಂಭ. ಪ್ರಾರಂಭದಲ್ಲಿ ಇಬ್ಬರೂ ರಚಿಸಿದ್ದು ಇಂಗ್ಲಿಷ್ ಸಾಹಿತ್ಯ. ಕಾಮತರ ಅಂದಿನ ಕಾವ್ಯನಾಮ “ರಾಬಿನ್ ರೆಡ್ ಬ್ರೆಸ್ಟ್”. ಇದೇ ಹೆಸರಿನಲ್ಲಿ ಹಲವಾರು ಸಾಹಿತ್ಯ ರಚನೆ. ಮುಂದೆ ಇಬ್ಬರೂ ಹೊರಳಿದ್ದು ಕನ್ನಡ ಸಾಹಿತ್ಯದತ್ತ.

೧೯೦೧ರಲ್ಲಿ ಎಫ್.ಎ. ಮುಗಿಸಿದ ಕಾಮತರು ಬಡತನದಿಂದ ಮುಂದೆ ವಿದ್ಯಾಭ್ಯಾಸ ಮುಂದುವರೆಸಲಾಗದೆ ಉದ್ಯೋಗಕ್ಕಾಗಿ ಸೇರಿದ್ದು ROSE AND COMPANY ಎರಡು ವರ್ಷ ಮುಂಬಯಿ, ಎಂಟು ವರ್ಷ ಕಲ್ಕತ್ತ ವಾಸ. ಪರಪ್ರಾಂತದಲ್ಲಿದ್ದರ ಪ್ರಯೋಜನ ಮರಾಠಿ ಬಂಗಾಲಿ ಕಲಿತದ್ದು. ೧೯೧೦ರಲ್ಲಿ ತಾಯ್ನಾಡಿಗೆ ಹಿಂದಿರುಗಿದರು. ಪುನಃ ಮದರಾಸಿಗೆ ಹೋಗಿ ಪಡೆದ ಶೈಕ್ಷಣಿಕ ತರಬೇತಿ. ಮೂಲ್ಕಿ, ಬಂಟವಾಳದ ಶ್ರೀ ತಿರುಮಳ ದೇವಾಳದ ಶಾಲೆ ನಂತರ ೧೯೧೮ರಿಂದ ಮಂಗಳೂರು ಕೆನರಾ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ-ನಿವೃತ್ತರಾಗುವವರೆವಿಗೂ ಇಲ್ಲೇ ಸೇವೆ ಸಲ್ಲಿಸಿದರು. ಬೋಸಿದ್ದು ಭೂಗೋಳ ಶಾಸ್ತ್ರವಾದರೂ ರಚಿಸಿದ್ದು ಶಿಶುಸಾಹಿತ್ಯ, ಹರಟೆ, ಕವನ, ಕಥೆ.

ಬಾಲಕರ ಮಹಾಭಾರತ, ಯಾದವಕೃಷ್ಣ, ಚಂಡ ಕೌಶಿಕ, ಮುಂತಾದ ಗದ್ಯಕೃತಿಗಳು. ಸಾಹಿತ್ಯರೈಲ್ವೆ, ಬೀಡಿ ಸೇದಬೇಡಿ ಇವರ ಪ್ರಸಿದ್ಧ ಹರಟೆಗಳು. ಇದಲ್ಲದೆ ಒಂದನೆಯ ತರಗತಿಯಿಂದ ಎಂಟನೆಯ ತರಗತಿಯವರೆವಿಗೂ ಅನೇಕ ಪಠ್ಯಪುಸ್ತಕಗಳ ರಚನೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಕಥೆಗಾರರ ಸಮ್ಮೇಳನದ (೧೯೪೦ರ ಜನವರಿ ೨೦, ೨೧) ಅಧ್ಯಕ್ಷೀಯ ಭಾಷಣ ಮಾಡುತ್ತಲೇ ಹಲವಾರು ಸಣ್ಣ ಕಥೆಗಳನ್ನು ಹೇಳಿ ರಂಜಿಸಿದರಂತೆ.

ಪತ್ರಿಕಾ ಕ್ಷೇತ್ರದಲ್ಲಿಯೂ ದುಡಿದಿದ್ದಾರೆ. ಆನಂದ, ಬೋನಿ, ಉದಯಭಾರತ, ಕಂಠೀರವ ಮುಂತಾದ ಪತ್ರಿಕೆಗಳೊಡನೆ ಸಂಪರ್ಕ ಹೊಂದಿದ್ದರು. ಪ್ರಸಿದ್ಧ ಪತ್ರಕರ್ತ ಹುರುಳೀ ಭೀಮರಾಯರು ‘ಕರ್ನಾಟಕ ಪತ್ರಿಕಾ ಪ್ರಪಂಚದ ಅಕ್ಷಯಪಾತ್ರೆ’ ಎಂದು ಬಣ್ಣಿಸಿದ್ದಾರೆ. ಸಾಹಿತ್ಯದಲ್ಲಿ ಹೆಸರು ಗಳಿಸಿದರೂ ಬಡತನದಲ್ಲೇ ಬೆಂದು ನಿಧನರಾದದ್ದು ೨೪.೪.೧೯೪೦ರಂದು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

Share this on WhatsApp ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ …

Loading...
Facebook Messenger for Wordpress