AN Ramanna

ಅ.ನ. ರಾಮಣ್ಣ

ಅ.ನ. ರಾಮಣ್ಣ (೦೨.೦೩.೧೯೪೦): ವೃತ್ತಿ ರಂಗಭೂಮಿಯಿಂದ ಹಿಡಿದು ಆಧುನಿಕ ನಾಟಕಗಳವರೆಗೆ ಹಲವಾರು ವಿಭಿನ್ನ ಪಾತ್ರಗಳ ಮೂಲಕ ರಂಗಭೂಮಿಗೆ ಕೊಡುಗೆ ನೀಡಿರುವ ರಾಮಣ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಗೆ ಸೇರಿದ ಹದಮಗೆರೆ ಗ್ರಾಮ. ತಂದೆ ನರಸಯ್ಯ, ತಾಯಿ ನರಸಮ್ಮ. ಓದಿದ್ದು ಎಸ್.ಎಸ್.ಎಲ್.ಸಿ., ಎಚ್.ಎ.ಎಲ್.ನಲ್ಲಿ ದೊರೆತ ಉದ್ಯೋಗ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಪಡೆದ ಪ್ರೇರಣೆ. ಸ್ಕೂಲಿನಲ್ಲಿದ್ದಾಗಲೇ ಸಣ್ಣ ಪುಟ್ಟ ಪಾತ್ರದಿಂದ ನಾಟಕದತ್ತ ವಾಲಿದ ಮನಸ್ಸು. ಕೆ.ಆರ್. ನಗರದ ಸಂತೆ ಸರಗೂರು ಅನಂತರಾಯರ ಕಲಾ ಪ್ರೋತ್ಸಾಹದಿಂದ ‘ರಾಯರ ಸೊಸೆ’ ಸಾಮಾಜಿಕ ನಾಟಕದಲ್ಲಿ ವಹಿಸಿದ ಪ್ರಮುಖ ಪಾತ್ರ.

ಹೆಸರಾಂತ ಹರಿಕಥಾ ವಿದ್ವಾನ್ ಗುರುರಾಜುಲುನಾಯ್ಡು, ಗವಾಯಿ ರಂಗಸ್ವಾಮಿ, ದಾಶರಥ ದೀಕ್ಷಿತ್, ಎಂ.ಎಲ್. ಶ್ರೀನಿವಾಸಮೂರ್ತಿ ಇವರುಗಳ ಜೊತೆ ಅನೇಕ ನಾಟಕಗಳಲ್ಲಿ ಪಾತ್ರಧಾರಿ. ವೃತ್ತಿ ರಂಗಭೂಮಿಯ ನಾಟಕಗಳಲ್ಲೂ ವಹಿಸಿದ ಪಾತ್ರ. ಹಾರ್ಮೋನಿಯಂ ಕೃಷ್ಣರಾಯರ ಕಾಳಿದಾಸ, ಸುಭದ್ರಾಪರಿಣಯ, ಕುರುಕ್ಷೇತ್ರ, ಶ್ರೀಕೃಷ್ಣ ಗಾರುಡಿ, ರಾಮಾಂಜನೇಯ ಯುದ್ಧ ನಾಟಕಗಳಲ್ಲದೆ ಸಾಮಾಜಿಕ ನಾಟಕಗಳಾದ ದೇವದಾಸಿ, ಮಕ್ಮಲ್ ಟೋಪಿ, ಸಂಸಾರ ನೌಕೆ, ಎಚ್ಚಮನಾಯಕ, ಸಿಡಿಲಮರಿ, ಅಳಿಯದೇವರು, ಸದಾರಮೆ, ದಿವ್ಯದರ್ಶನ, ಪಂಚಭೂತ, ಮೀನಿನ ಹೆಚ್ಚೆ ನಾಟಕಗಳಲ್ಲೂ ಪ್ರಮುಖ ಪಾತ್ರ. ಹಿರಣ್ಣಯ್ಯ ಮಿತ್ರಮಂಡಲಿಯ ಭಕ್ತ ಕಬೀರ ಇವರಿಗೆ ಮಾನ್ಯತೆ ತಂದುಕೊಟ್ಟ ನಾಟಕ.

ಜಿ.ವಿ. ಶಿವಾನಂದರ ನಿರ್ದೇಶನದ ಭಗವದಜ್ಜುಕೀಯ, ೩೬ ಅಲ್ಲ ೬೩, ಕಾಕೋಳು ಸರೋಜರಾವ್‌ರವರ ರಮಾರಮಣ, ಶಾಮಣ್ಣನ ಚಿರೋಟಿ ನಾಟಕಗಳು. ಮಲ್ಲೇಶ್ವರ ಸೇವಾಶ್ರಮದ ಮಕ್ಕಳಿಗಾಗಿ ಕೃಷ್ಣ ಪಾರಿಜಾತ, ರಾಮಾಂಜನೇಯ ಯುದ್ಧ, ಕೃಷ್ಣಗಾರುಡಿ ನಿರ್ದೇಶಿಸಿದ ನಾಟಕಗಳು. ಮುಸುರಿ ಕೃಷ್ಣಮೂರ್ತಿ, ನರಸಿಂಹರಾಜು, ಬಾಲಕೃಷ್ಣ, ಉದಯಕುಮಾರ್, ಕಲ್ಯಾಣಕುಮಾರ್ ನಾಟಕಗಳಲ್ಲಿ ಖಾಯಂ ನಟ. ಸುಭದ್ರಾಪರಿಣಯದ ಅರ್ಜುನನ ಪಾತ್ರಕ್ಕೆ ದೊರೆತ ನಟರತ್ನಾಕರ ಬಿರುದು.

೨೦೦೫ರಲ್ಲಿ ಶಾಸಕರ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕರಿಗಷ್ಟೇ ಸೀಮಿತವಾಗಿದ್ದರೂ ವಾಟಾಳರ ಅಪೇಕ್ಷೆಯಂತೆ ಸಂಭಾಷಣೆಯಿಲ್ಲದೆ ನಟನೆಯಿಂದಲೇ ಎಲ್ಲರ ಗಮನ ಸೆಳೆದದ್ದು ವಿಶೇಷವಾಗಿತ್ತು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 5 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

Share this on WhatsApp ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ …

Loading...
Facebook Messenger for Wordpress